ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಕಸ್ತೂರಬಾ ಗಾಂಧಿ ಸ್ಮಾರಕ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಪತ್ರಿಕಾ ಸಮ್ಮೇಳನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಷ್ಟೇ ಪತ್ರಿಕಾ ರಂಗವೂ ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವಾಗಿದೆ. ಖಡ್ಗಕ್ಕಿಂತ ಲೇಖನಿ ಹೆಚ್ಚು ಪ್ರಭಾವಶಾಲಿ. ಸತ್ಯವನ್ನು ಜನರ ಮುಂದಿಡುವ ಪತ್ರಕರ್ತರಿಗೆ ಸಮಾಜದಲ್ಲಿ ಸದಾ ಗೌರವವಿದೆ ಎಂದು ಹೇಳಿದರು.
ದೀಪದ ಬೆಳಕಿನಲ್ಲಿ ಭಗವದ್ಗೀತೆಯನ್ನು ಓದಬಹುದಾದಂತೆ ಅದೇ ಬೆಳಕನ್ನು ದುರುಪಯೋಗಪಡಿಸಿಕೊಂಡು ತಪ್ಪು ಕಾರ್ಯಗಳನ್ನೂ ಮಾಡಬಹುದು. ಆದರೆ ಪ್ರತಿಯೊಬ್ಬರೂ ಸತ್ಯ, ನ್ಯಾಯ ಮತ್ತು ಸಮಾಜದ ಹಿತದ ಪರವಾಗಿ ನಿಲ್ಲಬೇಕು. ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಬೇಕು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇನ್ನಷ್ಟು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಪತ್ರಕರ್ತರಿಗೆ ಸ್ವಂತ ಭವನದ ಅಗತ್ಯವನ್ನು ಮನಗಂಡು ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಲಾಗಿದೆ. ಅದರ ನೋಂದಣಿ ವೆಚ್ಚವನ್ನೂ ವೈಯಕ್ತಿಕವಾಗಿ ಭರಿಸಿದ್ದೇನೆ. ಈಗಾಗಲೇ ಗುದ್ದಲಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿದ್ದು, ಅತ್ಯಾಧುನಿಕ ಹಾಗೂ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಾಣಕ್ಕೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುತ್ತೇನೆ. ಮುಂದಿನ ಆರುರಿಂದ ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ, ಮುಂದಿನ ಪತ್ರಿಕಾ ದಿನಾಚರಣೆಯನ್ನು ಹೊಸ ಭವನದಲ್ಲೇ ಆಚರಿಸುವ ಗುರಿ ಹೊಂದಿದ್ದೇವೆ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಸಮಾರಂಭಕ್ಕೂ ಮೊದಲು ಪತ್ರಕರ್ತರ ಭವನ ನಿರ್ಮಾಣ ಸ್ಥಳದಲ್ಲಿ ಶಾಸಕ ಶಿವಲಿಂಗೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪತ್ರಕರ್ತರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಪ್ರಮುಖ ಶಕ್ತಿಯಾಗಿದ್ದಾರೆ. ಜನರಿಗೆ ನಿಖರ, ಪಾರದರ್ಶಕ ಹಾಗೂ ವಸ್ತುನಿಷ್ಠ ಮಾಹಿತಿಯನ್ನು ತಲುಪಿಸಲು ಅವರು ಹಗಲಿರುಳು ಶ್ರಮಿಸುತ್ತಾರೆ. 2004ರಿಂದ ಹಾಸನ ಜಿಲ್ಲೆಯ ಪತ್ರಕರ್ತರೊಂದಿಗೆ ಹೊಂದಿರುವ 22 ವರ್ಷಗಳ ಬಾಂಧವ್ಯವು ತಮ್ಮ ಜೀವನದ ಅಮೂಲ್ಯ ಅನುಭವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ, ಅನಂತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ಅನಂತಕುಮಾರ್, ಹಿರಿಯ ವಕೀಲ ಬಿ.ಕೆ. ವಿವೇಕ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಂಪುರ ಶೇಖರ್, ಜಿಲ್ಲಾ ಸಂಘದ ಉಪಾಧ್ಯಕ್ಷ ಜಿ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಖಜಾಂಚಿ ಬೆಳವಾಡಿ ಪ್ರಕಾಶ್, ತಾಲೂಕು ಅಧ್ಯಕ್ಷ ಟಿ. ಆನಂದ್ ಸೇರಿದಂತೆ ವಿವಿಧ ತಾಲೂಕಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರಾಮಚಂದ್ರು ಅವರಿಗೆ ಎಸ್.ಎನ್. ಗೋಪಿನಾಥ್ ಸ್ಮಾರಕ ಪ್ರಶಸ್ತಿ, ರವಿಶಂಕರ್ ಅವರಿಗೆ ಪಿ. ಶಾಂತಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತರಾದ ಮಾಡಾಳು ಶಿವಲಿಂಗಪ್ಪ, ಬಿ.ಎಸ್. ಸೇತುರಾಂ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಾಕ್ಸ್: 22 ವರ್ಷದ ಬಾಂಧವ್ಯದ ನೆನಪುಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, "2004ರಿಂದ ಹಾಸನ ಜಿಲ್ಲೆಯ ಪತ್ರಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಳೆದ 22 ವರ್ಷಗಳಿಂದ ಅವರ ಸುಖ-ದುಃಖಗಳಿಗೆ ಸಾಕ್ಷಿಯಾಗಿದ್ದೇನೆ. ಪತ್ರಿಕೋದ್ಯಮ, ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಪತ್ರಕರ್ತರು ನಿರ್ವಹಿಸುತ್ತಿರುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಾರದರ್ಶಕತೆ ಮತ್ತು ಸತ್ಯನಿಷ್ಠೆ ಪತ್ರಿಕೋದ್ಯಮದ ಜೀವಾಳವಾಗಿರಬೇಕು " ಎಂದು ಅಭಿಪ್ರಾಯಪಟ್ಟರು.