ದೊಡ್ಡಬಳ್ಳಾಪುರ: ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಖಾತೆಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ ಸೂಚಿಸಿದರು
ದೊಡ್ಡಬಳ್ಳಾಪುರ: ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಖಾತೆಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ ಸೂಚಿಸಿದರು.
ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ₹2000 ನೀಡುತ್ತಿದ್ದು, ರಾಜ್ಯದಲ್ಲಿ ಪ್ರತಿ ತಿಂಗಳು ₹200 ಕೋಟಿ ಮೃತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಈಗಾಗಲೇ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿ ಎಲ್ಲಾ ಜಿಲ್ಲೆಗಳಲ್ಲಿ ಮೃತರ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ ಮೃತರ ಹೆಸರಿನಲ್ಲಿರುವ ಖಾತೆಗಳನ್ನು ಪತ್ತೆ ಹಚ್ಚಿ, ಮರಣ ಹೊಂದಿದ ನಂತರ ಖಾತೆಗೆ ಹಣ ಜಮೆ ಆಗಿರುವ ಹಣ ವಾಪಸ್ ಪಡೆಯಬೇಕು. ಜೊತೆಗೆ ಆ ಬ್ಯಾಂಕ್ ಖಾತೆಯನ್ನೂ ನಿಲ್ಲಿಸಬೇಕು. ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ವರದಿ ನೀಡಬೇಕು ಎಂದರು.
ಬಿಪಿಎಲ್ ಕಾರ್ಡ್ ವಾಪಸ್ ನೀಡಿ:
ಬಿಪಿಎಲ್ ಕಾರ್ಡ್‌ಗಳ ಏಕಾಏಕಿ ರದ್ದತಿಗೆ ಅಸಮಾಧಾನ ವ್ಯಕ್ತಪಡಿಸಿದ ಗ್ಯಾರಂಟಿ ಯೋಜನೆ ಸದಸ್ಯರು, ಬಡವರು, ಮಧ್ಯಮ ವರ್ಗದವರು ಮಕ್ಕಳ ಶೈಕ್ಷಣಿಕ ಬಿಲ್ ಪಾವತಿ ಉದ್ದೇಶಕ್ಕಾಗಿ, ಅಂಗವಿಕಲರ ಪಿಂಚಣಿ ಸೇರಿದಂತೆ ಇತರೆ ಸರ್ಕಾರಿ ಕೆಲಸಗಳಿಗೆ ರೇಷನ್ ಕಾರ್ಡ್ ಉಪಯೋಗಿಸುತ್ತಿದ್ದರು. ಆದರೆ ಏಕಾಏಕಿ ಬಿಪಿಎಲ್ ಕಾರ್ಡ್ ರದ್ದತಿಯಿಂದ ಹಲವರಿಗೆ ಅನಾನುಕೂಲವಾಗಿದೆ. ವಜಾ ಆಗಿರುವ ಬಿಪಿಎಲ್ ಕಾರ್ಡ್‌ಗಳನ್ನು ಖುದ್ದಾಗಿ ಭೇಟಿ ನೀಡಿ ಮರು ಪರಿಶೀಲಿಸಿ ಮತ್ತೆ ಅವರಿಗೆ ಕಾರ್ಡ್ ನೀಡಬೇಕು ಎಂದರು.
ಗೃಹಜ್ಯೋತಿ ದುರುಪಯೋಗ ನಿಲ್ಲಲಿ:
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳ ಬಿಲ್ ಪಾವತಿಗೆ ಬಿಲ್ ಕಲೆಕ್ಟರ್ ಖುದ್ದು ಮೀಟರ್ ರೀಡರ್ ಪರಿಶೀಲಿಸಿ ನಂತರ ಬಿಲ್ ನೀಡಬೇಕು. ಆದರೆ ಕೆಲವು ಭಾಗಗಳಲ್ಲಿ ಏಕಾಏಕಿ ಬಂದು ಮೀಟರ್ ನೋಡದೆ ಬಿಲ್ ನೀಡುವುದು, ದೂರದಲ್ಲಿಯೇ ಬಿಲ್ ಕೊಡುವಂತಹ ಘಟನೆಗಳು ನಡೆದಿವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಅಧ್ಯಕ್ಷರು ತಿಳಿಸಿದರು.
ಶಕ್ತಿ ಯೋಜನೆ ಯಶಸ್ಸು:
ಶಕ್ತಿ ಯೋಜನೆಯಿಂದ ಜಿಲ್ಲೆಯ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲಿ ಸರ್ಕಾರಿ ಬಸ್ಸುಗಳ ಕೊರತೆ ಇದೆ ಅಲ್ಲಿಗೆ ಬೇಡಿಕೆಗೆ ಅನುಗುಣವಾಗಿ ಬಸ್ ಗಳನ್ನು ಒದಗಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಮಟ್ಟದಲ್ಲಿ ಯುವನಿಧಿಗೆ ಒತ್ತು:
ಜಿಪಂ ಸಿಇಒ ಡಾ.ವಸಂತಿ ಅಮರ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿಗೆ ಪ್ರಾಮುಖ್ಯತೆ ನೀಡಿ, ಯುವನಿಧಿಯೊಂದಿಗೆ ಅವರಿಗೆ ಉದ್ಯೋಗ ಒದಗಿಸಬೇಕಿದೆ. ಆಯಾ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು, ಕಂಪೆನಿ ಮುಖ್ಯಸ್ಥರ ಸಭೆ ಕರೆದು ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಬೇಕು ಎಂದು ಇಒ ಗಳಿಗೆ ಸೂಚಿಸಿ, ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲು ಕಂಪನಿಗಳಿಗೆ ನಿರ್ದೇಶಿಬೇಕಿದೆ ಎಂದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ರಾಜಶೇಖರ್, ಅಬ್ದುಲ್ ಬಶೀರ್, ನಾರಾಯಣಸ್ವಾಮಿ, ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
29ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.