ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಸರ್ವೇಲೆನ್ಸ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲುಷಿತ ಕುಡಿಯುವ ನೀರು, ಇತರೆ ಆಹಾರ ಪದಾರ್ಥಗಳ ಸೇವನೆಯಿಂದ ಮನುಷ್ಯನಿಗೆ ಸಾಂಕ್ರಾಮಿಕ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾ, ಕಾಲರ, ಪ್ಲೇಗ್, ಫಂಗಸ್, ಪ್ಯಾರಾಸೈಟ್ ಸೇರಿದಂತೆ ವಿವಿಧ ಸೂಕ್ಷ್ಮಾಣು ಜೀವಿಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸಬೇಕು. ಮನೆಗಳು ಹಾಗೂ ಶಾಲೆಗಳಲ್ಲಿ ನೀರಿನ ಟ್ಯಾಂಕ್, ತೊಟ್ಟಿ ಹಾಗೂ ಸಂಪ್‌ಗಳಲ್ಲಿ ನೀರು ಕಲುಷಿತವಾಗದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂದರು.ನಿತ್ಯದ ಬಳಕೆಗಾಗಿ ಅವಶ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸಾಮಾನ್ಯವಾಗಿದ್ದು, ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಸೇರದಂತೆ ಎಚ್ಚರ ವಹಿಸಬೇಕು. ಆಗಾಗ್ಗೆ ನೀರನ್ನು ಬದಲಾಯಿಸುತ್ತಿರಬೇಕು. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕ್ರಮಗಳ ವಿಧಾನಗಳನ್ನು ಜನರಿಗೆ ತಿಳಿಸಿಕೊಡಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಆರೋಗ್ಯ ಕಾರ್ಯಕರ್ತರು ನೀರಿನ ಶುದ್ಧತೆಯ ಬಗ್ಗೆ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾತ್ರವಲ್ಲ, ಕೆಲಬಾರಿ ವಿಷಪೂರಿತ ಹಾವುಗಳಿಂದಲೂ ಸಮಸ್ಯೆ ಎದುರಾಗಲಿದೆ. ಜನವರಿ ೨೦೨೬ರಿಂದ ಈವರೆಗೆ ಜಿಲ್ಲೆಯಲ್ಲಿ ೬ ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಹಾವು ಕಚ್ಚಿದಾಗ ಅರ್ಧಮಂದಿ ಭಯದಿಂದಲೇ ಮೃತಪಡುವ ಸಂಭವಗಳೇ ಹೆಚ್ಚು. ಹಾವು ಕಚ್ಚಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಭಯ ಪಡದೇ, ನಾಟಿ ಔಷಧಿಗಳ ಮೊರೆಹೋಗದೇ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸ್ನೇಕ್‌ಬೈಟ್ ಔಷಧಿ ದಾಸ್ತಾನು ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.