ಗದಗ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕೇವಲ ಪುಸ್ತಕದಲ್ಲಿರಬಾರದು. ಅದರ ಜವಾಬ್ದಾರಿ ಅನುಷ್ಠಾನ ನಮ್ಮ ಮೇಲಿದೆ. ದೌರ್ಜನ್ಯ ಪೀಡಿತರ ಮನಸ್ಸಿನಲ್ಲಿ ಭಯವಲ್ಲ, ಭರವಸೆ ಮೂಡುವಂತೆ ಪೊಲೀಸ್ ಮತ್ತು ಆಡಳಿತ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರಿಧರ್ ತಿಳಿಸಿದರು.
ಸಭೆಯಲ್ಲಿ ದೂರನ್ನು ಸ್ವೀಕರಿಸುವ ಪೊಲೀಸ್ ಠಾಣೆ, ತಹಸೀಲ್ದಾರ್ ಕಚೇರಿ, ಸಮಾಜ ಕಲ್ಯಾಣ ಕಚೇರಿ ಮುಂತಾದ ಕಡೆ ದೂರವಾಣಿ ಸಂಖ್ಯೆಗಳು, ತುರ್ತು ಸಂಪರ್ಕ ವಿವರಗಳನ್ನು ಗೋಚರವಾಗುವಂತೆ ಅಂಟಿಸುವಂತೆ ಸೂಚಿಸಲಾಯಿತು.
ಪ.ಜಾ., ಪ.ಪಂ. ಜನರಿಗೆ ತಲುಪಬೇಕಾದ ವಸತಿ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹರಿಗೆ ಸಕಾಲದಲ್ಲಿಯೆ ದೊರಕಬೇಕು. ಹೊಂಬಳ ನಾಕಾದ ಸ್ಮಶಾನ ಭೂಮಿಯಲ್ಲಿ ಬೆಳೆದಿರುವ ಮುಳ್ಳಿನ ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದರು.ಸಮಿತಿ ಸದಸ್ಯರಾದ ಶರೀಫ್ ಬಿಳೆಯಲಿ, ಸುರೇಶ ನಡುವಿನಮನಿ, ವಿನಾಯಕ ಬಳ್ಳಾರಿ, ತುಕ್ಕಪ್ಪ ಪೂಜಾರ, ಶ್ರೀನಿವಾಸ ದ್ಯಾವನೂರ, ಧ್ರುವರಾಜ ಹೊನ್ನಪ್ಪನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹಬೂಬ ತುಂಬರಮಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ., ಕಾರ್ಮಿಕ ಇಲಾಖೆ ಅದಿಕಾರಿ ಶ್ರೀಶೈಲ ಸೋಮನಕಟ್ಟಿ, ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.