ದರ ಕುಸಿತ: ಮಾರುಕಟ್ಟೆಯಲ್ಲೇ ಕೊಳೆಯುತ್ತಿದೆ ಹೂ ರಾಶಿ

KannadaprabhaNewsNetwork | Published : Sep 23, 2024 1:25 AM

ಸಾರಾಂಶ

ಕಳೆದ ಒಂದೂವರೆ ತಿಂಗಳ ಹಿಂದೆ ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ, ಗೌರಿ ಗಣೇಶ ಹಬ್ಬದಲ್ಲಿ ಪರವಾಗಿಲ್ಲ ಎಂಬ ದರಕ್ಕೆ ಬಿಕರಿಯಾಗಿ, ಈಗ ಪಿತೃಪಕ್ಷದಲ್ಲಿ ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಗೆ ಹೂ ತಂದ ರೈತರು ಹೂ ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬರದ ನಡುವೆ ನಲುಗಿರುವ ಬಯಲುಸೀಮೆಯ ಜಿಲ್ಲೆ ಚಿಕ್ಕಬಳ್ಳಾಪುರ. ಇಂತಹ ಬರದ ನಡುವೆಯೂ ಜಿಲ್ಲೆಯ ರೈತರು ಹಗಲು ರಾತ್ರಿ ಅನ್ನದೆ ಭಗೀರಥ ಪ್ರಯತ್ನ ಮಾಡಿ, ಪಾತಾಳದಿಂದ ಅಂರ್ತಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನ ಬೆಳೆದಿದ್ದಾರೆ. ಆದರೆ ಕಳೆದ ಮೂರು ದಿನಗಳಿಂದ ಕೈಗೆ ಬಂದ ಬೆಳೆ ಮಾರಾಟವಾಗದೆ ಜಿಲ್ಲೆಯ ಹೂ ಬೆಳಗಾರರಿಗೆ ಬರೆ ಹಾಕಿದೆ.

ರಾಶಿ ರಾಶಿ ಹೂಗಳನ್ನು ಬಿಕರಿ ಮಾಡಲಾಗದೆ ಹೂ ಬೆಳೆಗಾರರು ಸುಖಾಸುಮ್ಮನೆ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ.

ಹೂ ಖರೀದಿದಾರರೇ ಇಲ್ಲ

ಕಳೆದ ಒಂದೂವರೆ ತಿಂಗಳ ಹಿಂದೆ ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ, ಗೌರಿ ಗಣೇಶ ಹಬ್ಬದಲ್ಲಿ ಪರವಾಗಿಲ್ಲ ಎಂಬ ದರಕ್ಕೆ ಬಿಕರಿಯಾಗಿ, ಈಗ ಪಿತೃಪಕ್ಷದಲ್ಲಿ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷ್ಮೀ ಹಬ್ಬದಂದು 1 ಕೆಜಿ ಚೆಂಡು ಹೂ 40 ರಿಂದ 60 ರೂಪಾಯಿಗೆ,ಸೇವಂತಿಗೆ 300-400 ರೂಪಾಯಿಗೆ, ಗೌರಿ ಗಣೇಶ ಹಬ್ಬದಲ್ಲಿ 1 ಕೆಜಿ ಚೆಂಡು ಹೂ 30 ರಿಂದ 40 ರೂಪಾಯಿಗೆ, ಸೇವಂತಿಗೆ 200-300 ರೂಪಾಯಿಗೆ,ಮಾರಾಟವಾಗಿತ್ತು. ಆದರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ.

ಕೆಜಿ ಚೆಂಡು ಹೂ ದರ ₹5

1 ಕೆಜಿ ಚೆಂಡು ಹೂ 5 ರೂಪಾಯಿ 10 ರೂಪಾಯಿ. 1 ಕೆಜಿ ಸೇವಂತಿಗೆ 30-50 ರೂಪಾಯಿಗೆ ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಹೂ ಕೇಳೋರಿಲ್ಲ.ಇನ್ನೂ ಹಬ್ಬಗಳ ಸಮಯದಲ್ಲಿ ಸೇವಂತಿಗೆ,ಚೆಂಡು ಹೂಗಳು ಉತ್ತಮ ದರಕ್ಕೆ ಬಿಕರಿಯಾಗಿದ್ದವು. ಈಗ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಚೆಂಡು- ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲಂದರಲ್ಲಿ ಬಿಸಾಡಿಹೋಗುವಂತಾಗಿದೆ.ಮತ್ತೊಂದೆಡೆ 150 ರೂಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು 20 ರಿಂದ 40 ರೂಪಾಯಿಗೆ ಮಾರಾಟವಾಗುತ್ತಿದೆ.

ಪಿತೃಪಕ್ಷ ವಾದ ಕಾರಣ ಆಂಧ್ರಪ್ರದೇಶ, ತೆಲಾಂಗಣದಲ್ಲಿ ಮತ್ತು ತಮಿಳುನಾಡಿನಲ್ಲಿ ಬೇಡಿಕೆ ಇಲ್ಲವಾಗಿರುವುದರಿಂದ. ಈಗ ಎಲ್ಲಡೆ ಮದುವೆ-ಮುಂಜಿಗಳು,ಸೇರಿದಂತೆ ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲ ಇದರಿಂದ ಆಂಧ್ರಪ್ರದೇಶ, ತೆಲಾಂಗಣ ಮತ್ತು ತಮಿಳುನಾಡಿನಿಂದ ವರ್ತಕರು ಹೂ ಕೊಳ್ಳಲು ಬರುತ್ತಿಲ್ಲಾ. ಇನ್ನೂ ಮಳೆಯಿಲ್ಲದೆ ಓಣ ಹವೆ ಇದ್ದ ಕಾರಣ ಚಿಕ್ಕಬಳ್ಳಾಪುರದಲ್ಲಿ ಹೂಗಳ ಇಳುವರಿಯಲ್ಲಿ ಹೆಚ್ಚಳವಾಗಿ ಹೂ ಬೆಲೆ ಕುಸಿದಿದೆ ಎನ್ನುತ್ತಾರೆ ವರ್ತಕರು.

ಲೋಡ್‌ಗಟ್ಟಲೇ ಹೂ ತಿಪ್ಪೆಗೆ

ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ಹೂಗಳನ್ನು ಕೊಂಡು ಕೊಳ್ಳುವವರಿಲ್ಲದೆ ಹೂ ತಿಪ್ಪೆಗೆ ಪಾಲಾಗುತ್ತಿವೆ. ರಾಶಿ ರಾಶಿ, ಲೋಡ್‌ಗಟ್ಟಲೆ ಹೂ ಗಳನ್ನು ತಿಪ್ಪೆಗೆ ಸುರಿದು ಹೂ ಬೆಳೆಗಾರರು ಆಕ್ರೋಶ ಹೊರ ಹಾಕಿದ್ದಾರೆ. ಹೂ ಬೆಳೆ ಹಾಗೂ ಹೂ ಮಾರುಕಟ್ಟೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದಲ್ಲೇ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಮತರ ರೂಪಾಯಿ ಖರ್ಚು ಮಾಡಿ ತರೇವಾರಿ ಸೇವಂತಿ ಹೂ ಬೆಳೆದಿದ್ದ ರೈತರು ಈಗ ಕೆ.ಜಿ ಹೂ ಬೆಲೆ 10 ರೂಪಾಯಿ 20 ರೂಪಾಯಿ ಆಗಿದೆ. ಪ್ರಸ್ತುತ ಬೆಲೆಗೆ ಕೂಲಿಯೂ ಹೊರಡಲ್ಲ, ಮಾಡಿದ ಸಾಲಾ ತೀರಿಸಲು ಜಮೀನು ಅಡ ಇಡುವಂತಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ

ಬೆಳೆ ಇದ್ದಾಗ ಉತ್ತಮ ಬೆಲೆ ಇಲ್ಲ

ಜನವರಿಯಲ್ಲಿ ಹೂವಿನ ನಾರು ತಂದು ನಾಟಿ ಮಾಡಿದರೆ ಆಗಸ್ಟ್‌- ಸೆಪ್ಟೆಂಬರ್ ತಿಂಗಳಿನಲ್ಲಿ ತೋಟದ ತುಂಬಾ ಹೂ ಫಸಲು ಬಿಡುತ್ತದೆ. ಈ ಹೂವುಗಳಿಗೆ ಗೌರಿ ಗಣೇಶ ಹಬ್ಬ, ವರಲಕ್ಷ್ಮಿ ಹಬ್ಬಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆಯಿದ್ದಾಗ ಬೆಲೆ ಇಲ್ಲ ಎನ್ನುವ ಸ್ಥಿತಿ ಹೂ ಬೆಳೆಗಾರರದ್ದಾಗಿದೆ.

Share this article