ಏಕನಾಥ ಮೆದಿಕೇರಿ ಹನುಮಸಾಗರ
ಡೀಸೆಲ್, ಪೆಟ್ರೋಲ್ ದರ ನಿರಂತರ ಏರಿಕೆಯಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಹೆಚ್ಚಳವಾಗಿದ್ದು, ಮುಂಗಾರು ಕೃಷಿ ಆರಂಭದ ಹೊತ್ತಿನಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಸದ್ಯ ಮುಂಗಾರು ಆರಂಭವಾಗಿದ್ದು, ರೈತರು ಹೊಲಗಳ ಬಿತ್ತನೆಗೆ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕೃಷಿಗೆ ಅಗತ್ಯವಾದ ಬೀಜ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯ ಜತೆಗೆ ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಳವಾಗಿರುವುದರಿಂದ ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಸಹಕಾರಿ ಸಂಘ, ಬ್ಯಾಂಕ್ ಹಾಗೂ ಖಾಸಗಿ ಸಾಲದಾತರ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.ಡೀಸೆಲ್ ಹೊರೆ: ಆಧುನಿಕ ಕೃಷಿ ಪದ್ಧತಿಯಲ್ಲಿ ಟ್ರ್ಯಾಕ್ಟರ್, ರೂಟರ್, ಬಿತ್ತನೆ ಯಂತ್ರ, ಕಟಾವು ಯಂತ್ರ, ಜೆಸಿಬಿ ಸೇರಿದಂತೆ ಹಲವು ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಇವುಗಳೆಲ್ಲ ಡೀಸೆಲ್ ಆಧಾರಿತವಾಗಿರುವುದರಿಂದ ಇಂಧನ ದರ ಏರಿಕೆ ನೇರ ಪರಿಣಾಮ ರೈತರ ಮೇಲೆ ಬೀಳುತ್ತಿದೆ. ಸದ್ಯ ಪ್ರತಿ ಲೀಟರ್ ಡೀಸೆಲ್ ಬೆಲೆ ನೂರರ ಸಮೀಪದಲ್ಲಿದ್ದು, ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ಈ ಹಿಂದೆ ಗಂಟೆಗೆ ₹ 800 ರಿಂದ ₹900 ವರೆಗೆ ಇದ್ದ ಜೆಸಿಬಿ ಬಾಡಿಗೆ ಈಗ ₹1000 ದಿಂದ ₹1200 ವರೆಗೆ ಏರಿಕೆಯಾಗಿದೆ. ಇದರಿಂದ ರೈತರು ಕೃಷಿ ಕಾರ್ಯ ಆರಂಭಿಸುವ ಮೊದಲೇ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಅತಿವೃಷ್ಟಿ ಹಾಗೂ ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ ಆರಂಭದಲ್ಲೇ ದುಬಾರಿ ಕೃಷಿ ವೆಚ್ಚ ಎದುರಾಗಿರುವುದರಿಂದ ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ. ಬೆಳೆ ಕೈಗೆ ಬರುವವರೆಗೂ ಖರ್ಚು ನಿರ್ವಹಿಸುವುದು ಕಷ್ಟವಾಗಿದ್ದು, ಬೆಳೆ ಉತ್ತಮವಾಗಿ ಬಂದರೂ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗುತ್ತದೆಯೇ ಎಂಬ ಚಿಂತೆಯೂ ರೈತರನ್ನು ಕಾಡುತ್ತಿದೆ.
ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಇಂಧನ ದರ ಏರಿಕೆಯಿಂದ ಯಂತ್ರೋಪಕರಣಗಳ ಬಾಡಿಗೆ ದುಬಾರಿಯಾಗಿದೆ. ಕಳೆದ ವರ್ಷ ಮಳೆಯಿಂದ ನಷ್ಟ ಅನುಭವಿಸಿದ್ದೇವೆ. ಈಗ ಕೃಷಿ ಚಟುವಟಿಕೆ ಆರಂಭಕ್ಕೂ ಸಾಲ ಮಾಡಬೇಕಾಗಿದೆ. ಸರ್ಕಾರ ಇಂಧನ ದರ ಕಡಿತ ಮಾಡಿ ಕೃಷಿ ಕ್ಷೇತ್ರಕ್ಕೆ ನೆರವಾಗಬೇಕು ಎಂದು ಹನುಮಸಾಗರ ರೈತ ಜಗದೀಶ ಕುಂಬಾರ ತಿಳಿಸಿದ್ದಾರೆ.