ಕನ್ನಡಪ್ರಭ ವಾರ್ತೆ ಪುತ್ತೂರು
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು ಕಾಲಿನಡಿಗೂ, ತಲೆಯ ಮೇಲಿಗೂ ಬೆಂಕಿ ಹಾಕಿ ಪ್ರಜೆಗಳನ್ನು ಬೇಯಿಸುತ್ತಿದೆ. ಸರ್ಕಾರಗಳು ಸ್ಪರ್ಧಾತ್ಮಕವಾಗಿ ಬೆಲೆ ಏರಿಕೆ ಮಾಡುವ ಮೂಲಕ ಬಡ ಮತ್ತು ಸಾಮಾನ್ಯ ಜನರ ಬದುಕನ್ನು ಕಂಗಾಲಾಗಿಸಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಎಂ.ಭಟ್ ಆರೋಪಿಸಿದ್ದಾರೆ.ಸಿಪಿಐಎಂ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಮಂಗಳವಾರ ಪುತ್ತೂರಿನ ಉಪವಿಭಾಗಾಧಿಕಾರಿ ಕಚೇರಿ ಮುಂಬಾಗದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಟೋಲ್, ಗ್ಯಾಸ್, ಪೆಟ್ರೋಲ್, ಡೀಸಿಲ್, ಔಷಧ, ಕಾರು, ಶಿಕ್ಷಣ, ಹೊಟೇಲ್ ದರ, ವೀಸಾ ಶುಲ್ಕ, ಬೆಳ್ಳಿ, ರಸಗೊಬ್ಬರ, ಕಾಫಿ, ಚಹಾ, ಇತ್ಯಾದಿಗಳ ದರವನ್ನು ಏರಿಸುವುದರ ಮೂಲಕ ಮತ್ತು ತೆರಿಗೆ ಹೆಚ್ಚಿಸುವ ಮೂಲಕ ವಿಪರೀತ ಬೆಲೆ ಏರಿಕೆ ಮಾಡಿದೆ. ಆದರೆ ಬಿಜೆಪಿ ತನ್ನ ಕೇಂದ್ರ ಸರ್ಕಾರದ ಬೆಲೆಏರಿಕೆ ಸಮರ್ಥಿಸುತ್ತಾ, ರಾಜ್ಯದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಹೋರಾಟ ನಡೆಸುತ್ತಿದೆ ಎಂದರು.ರಾಜ್ಯ ಸರ್ಕಾರ ಡೀಸೆಲ್, ಹಾಲು, ವಿದ್ಯುತ್, ಸಾರಿಗೆ, ಸಿ.ಎನ್.ಜಿ. ಕಸ ವಿಲೆವಾರಿ ಶುಲ್ಕ, ಮುದ್ರಾಂಕ ಶುಲ್ಕ, ತರಕಾರಿ ಇತ್ಯಾದಿಗಳನ್ನು ದುಬಾರಿಗೊಳಿಸಿದ್ದರೂ ಕಾಂಗ್ರೆಸ್ ಪಕ್ಷ ತನ್ನ ರಾಜ್ಯ ಸರ್ಕಾರದ ಬೆಲೆಏರಿಕೆಯನ್ನು ಸಮರ್ಥಿಸುತ್ತಾ ಕೇಂದ್ರ ಬಿಜೆಪಿ ಸರ್ಕಾರದ ಬೆಲೆಏರಿಕೆಯ ವಿರುದ್ದ ಹೋರಾಟ ನಡೆಸುತ್ತಿದೆ. ಶಾಸಕರ, ಸಂಸದರ ವೇತನ ಭತ್ಯೆಗಳನ್ನು ಡಬಲ್ ಏರಿಸುವ ಮೂಲಕ ಅದನ್ನು ಸಮರ್ಥಿಸುವ ಈ ಎರಡೂ ಸರ್ಕಾರಗಳಿಗೆ ಜನ ಸಾಮಾನ್ಯರ ಕಷ್ಟಗಳು ಅರ್ಥವಾಗುತ್ತಿಲ್ಲ ಎಂದು ಹೇಳಿದರು
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಮಾತನಾಡಿ, ಉದ್ಯೋಗ ಸೃಷಿಗೆ ಕ್ರಮ ಕೈಗೊಳ್ಳದ ಸರಕಾರಗಳು, ಜನರ ಬದುಕಿನ ಭದ್ರತೆಗೆ ಗಮನ ನೀಡುತ್ತಿಲ್ಲ ಎಂದರು. ಕಾರ್ಮಿಕರ ಹಕ್ಕು ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರಗಳು ಕಾರ್ಮಿಕರ ವೇತನ ಕಡಿತಗೊಳಿಸುತ್ತಿದೆಯಲ್ಲದೆ ಜೊತೆಗೆ ಈ ಬೆಲೆಏರಿಕೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಪುತ್ತೂರು ಸಿಪಿಐಎಂ ನಾಯಕ ನ್ಯಾಯವಾದಿ ಪಿ.ಕೆ.ಸತೀಶನ್, ಇಂದು ಬೆಲೆ ಏರಿಕೆಯೇ ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ಅದರ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇರುವುದು ಸಿಪಿಎಂ ಪಕ್ಷಕ್ಕೆ ಮಾತ್ರ ಎಂದರು.
ಬೆಲೆ ಏರಿಕೆ ತಡೆಯಲು ಮತ್ತು ಜನರ ಕೊಳ್ಳುವ ಶಕ್ತಿಯ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದುಡಿಯುವ ಜನರ ವೇತನ ಏರಿಕೆಗೂ ಸೂಕ್ತ ಗಮನ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.ಹೋರಾಟದ ನೇತೃತ್ವ ವಹಿಸಿದ್ದ ಪಕ್ಷದ ಮುಖಂಡರಾದ ಜನಾರ್ದನ ಗೌಡ, ಕೃಷ್ಣ,. ಗುಡ್ಡಪ್ಪ ಗೌಡ ಸರ್ವೇ, ನೆಬಿಸಾ, ಜಯಶ್ರೀ, ಪುಷ್ಪಾ, ಅಶ್ವಿತ, ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಅಭಿಷೇಕ್, ಬಿಸಿಯೂಟ ಸಂಘದ ಮುಖಂಡರಾದ ಲೀಲಾವತಿ, ಕಾರ್ಮಿಕ ಮುಖಂಡರಾದ ಡೊಂಬಯ ಗೌಡ, ಜಯಂತ, ಚೋಮ ಮತ್ತಿತರರು ಇದ್ದರು.