ಯಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಓರ್ವ ವ್ಯಕ್ತಿ ಅಲ್ಲ, ಅವರೊಂದು ದೇಶದ ಚಾಲಕ ಶಕ್ತಿ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಸೇವಾ ಪಾಕ್ಷಿಕದ ಭಾಗವಾಗಿ ಬಿಜೆಪಿ ಯಲ್ಲಾಪುರ ಮಂಡಳ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಂಚೀಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡುತ್ತಿದ್ದರು.ಬಿಜೆಪಿಯು ವ್ಯಕ್ತಿ ಆಧಾರಿತ ಪಕ್ಷ ಅಲ್ಲ. ಮೋದಿ ಅದನ್ನೇ ಹೇಳುತ್ತಾರೆ. ಆದರೆ ಮೋದಿಯ ಸದೃಢ ನೇತೃತ್ವ, ಸಮರ್ಥ ಆಡಳಿತದಿಂದ ಕೋಟ್ಯಂತರ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಅವರೆಕ್ಕ ಅಭಿಮಾನಿಗಳು ಮೋದಿ ಜನ್ಮದಿನ ಆಚರಿಸುತ್ತಿದ್ದಾರೆ ಎಂದರು.
ಸಮರ್ಥ ನೇತೃತ್ವ, ಪಾರದರ್ಶಕ ಆಡಳಿತ, ಸಾರ್ವತ್ರಿಕ ಕಳಕಳಿ ಮೂಲಕ ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಕೇವಲ ದೇಶದ ಮಾತ್ರವಲ್ಲ, ಇಡೀ ವಿಶ್ವದ ಜನರ ಮನಗೆದ್ದಿದ್ದಾರೆ. ಪಕ್ಷದ, ಕೋಟ್ಯಂತರ ಮತದಾರರ ನಿರೀಕ್ಷೆಯನ್ನು ಅವರು ಸಾಕಾರಗೊಳಿಸಿದ್ದಾರೆ ಎಂದರು.ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ ಮಾತನಾಡಿ, ಬಿಜೆಪಿ ಸದಾ ಜನಪರ ಎಂಬುದನ್ನು ಸೇವಾ ಪಾಕ್ಷಿಕದ ಮೂಲಕ ಮತ್ತೊಮ್ಮೆ ನಿರೂಪಿಸಿದೆ. ಅಭಿವೃದ್ಧಿಗೆ ಬಿಜೆಪಿ ಎಷ್ಟು ಮಹತ್ವ ನೀಡುತ್ತಿದೆ ಎಂಬುದನ್ನು ಬಿಜೆಪಿಯ ಕಾರ್ಯಗಳೇ ತೋರಿಸುತ್ತಿವೆ ಎಂದರು.
ಸೇವಾ ಪಾಕ್ಷಿಕದ ಸಂಚಾಲಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಬ್ರಾಯ ವಾಲ್ಕೆ ಮುಂದಿನ 15 ದಿನಗಳ ಕಾಲ ಹಮ್ಮಿಕೊಂಡ ವಿವಿಧ ಸೇವಾ ಕಾರ್ಯಗಳ ಮಾಹಿತಿ ನೀಡಿದರು.ಟಿಎಸ್‌ಎಸ್ ಆಸ್ಪತ್ರೆ ವೈದ್ಯ ಡಾ.ಪಿ.ಎಸ್ ಹೆಗಡೆ ರಕ್ತದಾನದ ಮಹತ್ವ ತಿಳಿಸಿ ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಿರುವುದು ಅರ್ಥಪೂರ್ಣ ಎಂದರು.
ಜಿಪಂ ಮಾಜಿ ಸದಸ್ಯ, ಬಿಜೆಪಿ ಪ್ರಮುಖ ರಾಘವೇಂದ್ರ ಭಟ್ಟ ಮಾತನಾಡಿ, ರಕ್ತದಾನ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು.ಶಿಬಿರದಲ್ಲಿ 72 ಮಂದಿ ರಕ್ತದಾನ ಮಾಡಿದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್ಟ ಸ್ವಾಗತಿಸಿದರು. ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ವಂದಿಸಿದರು. ಡಾ.ಸೋಮನಾಥ, ರಘುಪತಿ ಕಂಪ್ಲಿ, ಪವನಕುಮಾರ್ ಕೇಸರ್ಕರ್, ಮಹಾಶಕ್ತಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪತ್ರೇಕರ, ಶಕ್ತಿ ಕೇಂದ್ರ ಪ್ರಮುಖರಾದ ಗಣಪತಿ ಶಂಕರಗದ್ದೆ, ದಿವಾಕರ ಪೂಜಾರಿ ಇದ್ದರು.