ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸದೃಢ ನಾಯಕ

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ದೇಶದ ಪ್ರತಿಯೊಬ್ಬ ಯುವಕರು ಉದ್ಯೋಗ ಹೊಂದುವ ಗುರಿ ಪ್ರಧಾನಿಗಳದ್ದಾಗಿದೆ. ಬರೀ ಉದ್ಯೋಗ ಪಡೆಯದೇ ಇತರರಿಗೂ ಉದ್ಯೋಗ ನೀಡುವ ಸಾಮರ್ಥ್ಯ ನಿಮ್ಮಲ್ಲಿ ಬರಬೇಕಿದೆ ಎಂಬುದು ಮೋದಿ ಅವರ ಸಂಕಲ್ಪವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಲವು ಸಾಲ ಸೌಲಭ್ಯ, ಯೋಜನೆ ಜಾರಿಗೊಳಿಸುವ ಮೂಲಕ ಸದೃಢ ರಾಷ್ಟ್ರ ಮಾಡುವ ಸಂಕಲ್ಪ ಹೊಂದಿದ್ದಾರೆ.

ಹುಬ್ಬಳ್ಳಿ: ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಸದೃಢ ನಾಯಕರು ಎಂದು ದೇಶದ ಜನತೆಗೆ ಗೊತ್ತಾಗಿದೆ. ಒಬ್ಬ ಸದೃಢ ನಾಯಕನಾದವನು ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಅವರು ಗುರುವಾರ ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ಬಿಜೆಪಿ ಯುವಮೋರ್ಚಾದಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ನವ ಮತದಾತ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರ ವೀಕ್ಷಣೆ, ಹೊಸ ಮತದಾರರ ಮಿಸ್‌ಕಾಲ್‌ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಸುಮಾರು 5ಸಾವಿರ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ನವಭಾರತ ಸಮ್ಮೇಳನದ ಮೂಲಕ ಕೋಟ್ಯಂತರ ಯುವಮತದಾರರಿಗೆ ಮತದಾನದ ಅರಿವು ಮೂಡಿಸಿದ್ದಾರೆ. ದೇಶದಲ್ಲಿ 7 ಕೋಟಿಗೂ ಅಧಿಕ ಯುವ ಮತದಾರರಿದ್ದು, ಇವರೆಲ್ಲರ ನೋಂದಣಿ ಮಾಡುವ ಉದ್ದೇಶದಿಂದ ದೇಶಾದ್ಯಂತ ಈ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ದೇಶದ ಪ್ರತಿಯೊಬ್ಬ ಯುವಕರು ಉದ್ಯೋಗ ಹೊಂದುವ ಗುರಿ ಪ್ರಧಾನಿಗಳದ್ದಾಗಿದೆ. ಬರೀ ಉದ್ಯೋಗ ಪಡೆಯದೇ ಇತರರಿಗೂ ಉದ್ಯೋಗ ನೀಡುವ ಸಾಮರ್ಥ್ಯ ನಿಮ್ಮಲ್ಲಿ ಬರಬೇಕಿದೆ ಎಂಬುದು ಮೋದಿ ಅವರ ಸಂಕಲ್ಪವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಲವು ಸಾಲ ಸೌಲಭ್ಯ, ಯೋಜನೆ ಜಾರಿಗೊಳಿಸುವ ಮೂಲಕ ಸದೃಢ ರಾಷ್ಟ್ರ ಮಾಡುವ ಸಂಕಲ್ಪ ಹೊಂದಿದ್ದಾರೆ. ಇವುಗಳ ಸದುಪಯೋಗ ಯುವಜನತೆ ಪಡೆದುಕೊಳ್ಳಬೇಕು ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆಯೇ 500 ವರ್ಷಗಳ ಹೋರಾಟಕ್ಕೆ ಈಗ ಜಯ ದೊರೆತಿದೆ. ಅವರ ಅಧಿಕಾರವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ದೇಶದ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದ್ದು, 2047ಕ್ಕೆ ಭಾರತವು ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಖಚಿತ. ಒಟ್ಟಾರೆ ಭಾರತವನ್ನು ಜಗನ್ಮಾಥೆಯನ್ನಾಗಿ ಬೆಳೆಸುವುದು ಮೋದಿ ಉದ್ದೇಶವಾಗಿದೆ ಎಂದರು.

ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿವಿಯ ಉಪಕುಲಪತಿ ಅಶೋಕ ಶೆಟ್ಟರ ಮಾತನಾಡಿ, ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿತ್ತಾರೆ. ಆದರೆ, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರದಿರುವುದು, ಚುನಾವಣೆಯಿಂದ ದೂರ ಉಳಿಯುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಕರು ಸದೃಢ ನಾಯಕತ್ವದ ಶಕ್ತಿ ಹೊಂದಿರುವ, ದೂರದೃಷ್ಠಿವುಳ್ಳ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಶಕ್ತಿ ಹೊಂದಿದ್ದು, ಅರ್ಹ ಯುವ ಮತದಾರರು ಈ ಕುರಿತು ಜಾಗೃತಿ ಹೊಂದುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಸೇರಿದಂತೆ ಹಲವರಿದ್ದರು.

ಕೈಕೊಟ್ಟ ನೆಟವರ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ನಮೋ ನವಭಾರತ ಸಮ್ಮೇಳನದ ನೇರಪ್ರಸಾರ ವೇಳೆ 10 ನಿಮಿಷಕ್ಕೂ ಹೆಚ್ಚು ಕಾಲ ನೆಟವರ್ಕ್ ಸಮಸ್ಯೆ ಉಂಟಾಯಿತು. ಹಲವು ಬಾರಿ ಪ್ರಯತ್ನ ಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ನೇರ ವೀಕ್ಷಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.

ಕಾಲೇಜಿನಲ್ಲಿ ಮೊಳಗಿದ ಜೈ ಶ್ರೀರಾಮ: ಬಿವಿಬಿ ಕಾಲೇಜಿನಲ್ಲಿ ಗುರುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ನವಭಾರತ ಸಮ್ಮೇಳನದ ನೇರಪ್ರಸಾರ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ ಎಂದು ಘೋಷಣೆ ಕೂಗಿದರು.

Share this article