ನಾಗಮಂಗಲ ತಾಲೂಕಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಂದಿರ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏ.15ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಂದಿರ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏ.15ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿಡಾ.ಬಾಲಗಂಗಾಧರನಾಥ ಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಏ.10ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ.
ಡಾ.ಬಾಲಗಂಗಾಧರನಾಥ ಶ್ರೀಗಳು ಭೈರವೈಕ್ಯರಾದ ವೇಳೆ ಆದಿಚುಂಚನಗಿರಿ ಕ್ಷೇತ್ರದ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿಯೇ ಸಮಾಧಿ ಮಾಡಿ ಮಹಾ ಗದ್ದುಗೆ ಮಂಟಪ ನಿರ್ಮಿಸಲಾಗಿತ್ತು. ನಂತರ ಮೂಲ ಸಮಾಧಿಯ ಗದ್ದುಗೆಯನ್ನು ಯಥಾಸ್ಥಿತಿಯಲ್ಲಿರಿಸಿ ಮಂಟಪವನ್ನು ತೆರವುಗೊಳಿಸಿ ಎರಡು ಅಂತಸ್ತಿನ ಶ್ರೀಗುರು ಭೈರವೈಕ್ಯ ಮಂದಿರವನ್ನು ನಿರ್ಮಿಸಲು ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಆಶಯ ಹೊಂದಿದ್ದರು.
ಶ್ರೀಗಳ ಆಶಯದಂತೆ 175ಕ್ಕೆ 150 ಅಡಿ ವಿಸ್ತೀರ್ಣದಲ್ಲಿ ಕೆಂಪು ಶಿಲೆ ಮತ್ತು ವಿವಿಧ ಬಗೆಯ ಶಿಲಾ ಕಲ್ಲುಗಳಿಂದ ಶ್ರೀಗುರು ಭೈರವೈಕ್ಯ ಮಂದಿರ ನಿರ್ಮಾಣಗೊಂಡಿದೆ. ಭೈರವೈಕ್ಯಶ್ರೀಗಳ ಸಮಾಧಿಯನ್ನು ಮೂಲ ರೂಪದಲ್ಲಿಯೇ ಉಳಿಸಿ ಅದೇ ಸ್ಥಳದಲ್ಲಿ ಶ್ರೀ ಗುರು ಮಂದಿರ ನಿರ್ಮಿಸಿರುವುದು ಈ ಮಂಟಪದ ವಿಶೇಷವಾಗಿದೆ.
ಮಂಟಪದ ನೆಲಮಹಡಿಯಲ್ಲಿ ಗುರುಗಳ ಗದ್ದುಗೆಯಿದೆ. ಗದ್ದುಗೆಯ ಸುತ್ತ ಪ್ರದಕ್ಷಿಣಾ ಸ್ಥಳವಿರಲಿದೆ. ನೆಲಮಹಡಿಯ ಮೇಲಂತಸ್ತಿನಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ ಇರುವ ಭವ್ಯ ಮಂಟಪ ನಿರ್ಮಿಸಲಾಗಿದೆ. ಶ್ರೀಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ಪಶ್ಚಿಮ ಭಾಗಿಲಿಗೆ ಈ ಮಂಟಪದ ಮುಖ್ಯ ದ್ವಾರವಿದ್ದು ಅತ್ಯಾಧುನಿಕ ಶೈಲಿಯಲ್ಲಿ ನಾಥ ಪರಂಪರೆಯನ್ನು ಸಾರುವ ಶಿಲ್ಪಕಲೆಯೊಂದಿಗೆ ಮಂಟಪ ನಿರ್ಮಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸಲಾಗಿದೆ.
ಪ್ರಧಾನಿ ಮೋದಿಯಿಂದ ಉದ್ಘಾಟನೆ:
ನೂತನವಾಗಿ ನಿರ್ಮಿಸಿರುವ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯ ಶ್ರೀಗುರು ಭೈರವೈಕ್ಯ ಮಂದಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.15ರ ಬುಧವಾರ ಬೆಳಗ್ಗೆ ಉದ್ಘಾಟಿಸುವರು. ಬಳಿಕ ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸುವರು.
ಗಣ್ಯಾತಿ ಗಣ್ಯರು ಭಾಗಿ :
ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ನಾಡಿನ ವಿವಿಧ ಧರ್ಮಗುರುಗಳು, ಮಠಾಧೀಶರು, ಸಾಧು ಸಂತರು ಹಾಗೂ ಗಣ್ಯರು ಪಾಲ್ಗೊಳ್ಳುವರು.
ಮೋದಿ ಭೇಟಿ ಹಿನ್ನೆಲೆ ಡೀಸಿ, ಎಸ್ಪಿಯಿಂದ ಸ್ಥಳ ಪರಿಶೀಲನೆ:
ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಎಸ್ಪಿ ಡಾ.ವಿ.ಜೆ. ಶೋಭಾರಾಣಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. ನಂತರ ಬಿ.ಜಿ.ನಗರದ ವಿಜ್ಞಾತಂ ಭವನದಲ್ಲಿ ಡಾ.ನಿರ್ಮಲಾನಂದನಾಥ ಶ್ರೀಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ.
ಏ.15ರಂದು ಶ್ರೀಮಠಕ್ಕೆ ಸಾರ್ವಜನಿಕರಿಗೆ ನಿರ್ಬಂಧ:
ಏ.15ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆಯಲ್ಲಿ ಅಂದು ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿರುತ್ತದೆ ಎಂದು ಹೇಳಲಾಗುತ್ತಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವುದು ಬಹುತೇಕ ಖಚಿತವಾಗಿದ್ದರೂ ಕೂಡ ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತ ಸುತ್ತೋಲೆ ಬಾರದ ಹಿನ್ನಲೆಯಲ್ಲಿ ನರೇಂದ್ರ ಮೋದಿ ಭೇಟಿ ವಿಷಯವನ್ನು ಶ್ರೀಮಠ ಹಾಗೂ ಜಿಲ್ಲಾಡಳಿತ ಗೌಪ್ಯವಾಗಿಟ್ಟಂತಿದೆ.
ಶ್ರೀಗುರು ಭೈರವೈಕ್ಯ ಮಂದಿರದ ಕುಂಭಾಭಿಷೇಕ ಹಾಗೂ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಏ.10 ರಿಂದ 15ರವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಏ.10 ಮತ್ತು 11 ರಂದು ಹೋಮ ಹವನಾದಿ ಧಾರ್ಮಿಕ ಪೂಜಾ ಕಾರ್ಯಗಳು ನಡೆದರೆ, ಏ.12 ರಂದು ಕುಂಭಾಭಿಷೇಕ, ಏ.13 ಮತ್ತು 14 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.