ಮಂಗಳೂರು-ಗೋವಾ ಸೇರಿದಂತೆ 6 ವಂದೇ ಭಾರತ್‌ ರೈಲಿಗೆ 30ರಂದು ಪ್ರಧಾನಿ ಚಾಲನೆ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಮಂಗಳೂರು-ಗೋವಾ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ವೇಳೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್‌ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಳೆದ ಒಂದು ತಿಂಗಳಿಂದ ಈ ಫ್ಲ್ಯಾಟ್‌ಫಾರಂ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದ್ದು, ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳನ್ನು ಇಲ್ಲಿಂದಲೇ ಹೊರಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುನಿರೀಕ್ಷಿತ ಮಂಗಳೂರು-ಗೋವಾ ಸೇರಿದಂತೆ ದೇಶದ 6 ಕಡೆಗಳಲ್ಲಿ ಆರಂಭವಾಗುವ ವಂದೇ ಭಾರತ್‌ ರೈಲಿಗೆ ಬಹುತೇಕ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಅಂದು ಮಂಗಳೂರು-ಮಡ್ಗಾಂವ್‌(ಗೋವಾ) ಸೇರಿದಂತೆ ವಿವಿಧ 6 ಕಡೆಗಳಿಗೆ ವಂದೇ ಭಾರತ್‌ ಹಾಗೂ ಎರಡು ಕಡೆ ಅಮೃತ್‌ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ. ಮಂಗಳೂರು-ಗೋವಾ, ಮಂಗಳೂರು-ತಿರುವನಂತಪುರಂ ಹಾಗೂ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸೆ.22ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಪೈಕಿ ಪ್ರಥಮ ಹಂತದಲ್ಲಿ ಮಂಗಳೂರು-ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು -ಬೆಂಗಳೂರು ನಡುವೆಯೂ ವಂದೇ ಭಾರತ್‌ ಸಂಚಾರ ನಡೆಸಲಿದೆ. ಆದರೆ ಮಂಗಳೂರು-ತಿರುವನಂತಪುರಂ ನಡುವೆ ವಂದೇ ಭಾರತ್‌ಗೆ ಬೇಡಿಕೆ ಇದ್ದರೂ ಈಗಾಗಲೇ ತಿರುವನಂತಪುರಂ-ಕಾಸರಗೋಡು ನಡುವೆ ವಂದೇ ಭಾರತ್‌ ಸಂಚರಿಸುತ್ತಿದೆ. ಹಾಗಾಗಿ ಈ ರೈಲು ಮಂಗಳೂರು ವರೆಗೆ ವಿಸ್ತರಿಸುವ ಸಾಧ್ಯತೆ ತೀರ ವಿರಳ‍ ಎಂದು ಮೂಲಗಳು ಹೇಳುತ್ತಿವೆ. ಮಂಗಳೂರು-ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ರೈಲ್ವೆ ಸಂಘಟನೆಗಳೂ ಆಗ್ರಹಿಸಿದ್ದವು. ಹೊಸ ಫ್ಲ್ಯಾಟ್‌ ಫಾರಂ ಲೋಕಾರ್ಪಣೆ: ಮಂಗಳೂರು-ಗೋವಾ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ವೇಳೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್‌ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಳೆದ ಒಂದು ತಿಂಗಳಿಂದ ಈ ಫ್ಲ್ಯಾಟ್‌ಫಾರಂ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದ್ದು, ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳನ್ನು ಇಲ್ಲಿಂದಲೇ ಹೊರಡಿಸಲಾಗುತ್ತಿದೆ. ಇದು ಪೂರ್ಣಪ್ರಮಾಣದಲ್ಲಿ ಉದ್ಘಾಟನೆಗೊಂಡ ಬಳಿಕ ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್‌, ವಿಜಯಪುರ ಎಕ್ಸ್‌ಪ್ರೆಸ್‌ ಹಾಗೂ ಯಶವಂತಪುರ-ಗೊಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ಹಗಲು ರೈಲುಗಳ ಸಂಚಾರ ವೇಳಾಪಟ್ಟಿ ಪರಿಷ್ಕರಣೆಯೊಂದಿಗೆ ಮಂಗಳೂರು ಜಂಕ್ಷನ್‌ ಬದಲು ಮಂಗಳೂರು ಸೆಂಟ್ರಲ್‌ನಿಂದಲೇ ಆರಂಭಗೊಳ್ಳಲಿದೆ. ವಂದೇ ಭಾರತ್‌ ವಾರದಲ್ಲಿ 6 ದಿನ ಮಾತ್ರ ಸಂಚಾರಮಂಗಳೂರು-ಗೋವಾ ನಡುವಿನ ವಂದೇ ಭಾರತ್‌ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ 6 ದಿನವೂ ಸಂಚಾರ ನಡೆಸಲಿದೆ. ಕೇವಲ 4.35 ನಿಮಿಷದಲ್ಲಿ 315 ಕಿ.ಮೀ. ದೂರವನ್ನು ಗಂಟೆಗೆ 68.7 ಕಿ.ಮೀ. ವೇಗದಲ್ಲಿ ಕ್ರಮಿಸಲಿದೆ. ಪ್ರತಿದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1.05ಕ್ಕೆ ಮಡ್ಗಾಂವ್‌ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ವಂದೇ ಭಾರತ್‌ ರೈಲಿಗೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲಿನ ನಿರ್ವಹಣೆ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ನಡೆಯಲಿದೆ.

Share this article