ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಬೆಂಗಳೂರು ವಲಯ ಒಂದರ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲವಿತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆ ಹೆತ್ತವರನ್ನು ಮತ್ತು ಮಕ್ಕಳನ್ನು ಕಾಡುತ್ತಿತ್ತು. ಈಗ ಕಾಲ ಬದಲಾದಂತೆ ಯಾವುದೇ ಪದವಿ ಪಡೆದ ನಂತರವೂ ಈ ಪ್ರಶ್ನೆ ಎಲ್ಲರಲ್ಲೂ ಹಾಗೇ ಮುಂದುವರೆಯುತ್ತಿದೆ. ಎಲ್.ಎಲ್.ಬಿ. ನಂತರ ಮುಂದೇನು? ಅನ್ನುವ ಪ್ರಶ್ನೆ ನಮ್ಮೆಲ್ಲರಲ್ಲೂ ಹುಟ್ಟಿಕೊಂಡಿರುವುದು ಅಷ್ಟು ಅಸಹಜವೇನಲ್ಲ. ಆದರೆ, ಈ ಪ್ರಶ್ನೆಗೆ ಸರಿಯಾದ ಉತ್ತರದೊಂದಿಗೆ ಎದುರುಗೊಳ್ಳುವುದು ಹೇಗೆ ಅನ್ನುವುದು ಅಷ್ಟೇ ಮುಖ್ಯ. ಬೆಳಗ್ಗೆ ಎದ್ದಕೂಡಲೇ ಒಬ್ಬ ವ್ಯಕ್ತಿಗೆ ಇವತ್ತಿನ ಬದುಕಿನ ಪಾಡೇನೂ ಎನ್ನುವ ಪ್ರಶ್ನೆಯ ರೀತಿಯಲ್ಲಿಯೇ ಅಂತಿಮ ವರ್ಷದ ಕಾನೂನು ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲೂ ಮೂಡಲೇಬೇಕು ಎಂದು ಅವರು ಹೇಳಿದರು.ಭಾರತ ದಂಡ ಸಂಹಿತೆ 1860, ದಂಡ ಪ್ರಕ್ರಿಯಾ ಸಂಹಿತೆ 1973, ಭಾರತೀಯ ಸಾಕ್ಷ್ಯ ಅಧಿನಿಯಮ 1872 ದೇಶದ ಈ ಮೂರು ಕ್ರಿಮಿನಲ್ ಕಾನೂನುಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದ ನೀವು ವಕೀಲಿ ವೃತ್ತಿಗೆ ಕಾಲಿಡುತ್ತಿದ್ದೀರಿ. ಹೊಸ ಕಾನೂನು ಹೇಗೋ ಏನೋ ಎನ್ನುವ ಆತಂಕ ನಿಮ್ಮಲ್ಲಿರಬಹುದು. ಇದು ಸಹಜ ಕೂಡ. ಭಾರತದ ಕಾನೂನುಗಳು ನಿಂತ ನೀರಲ್ಲ ಎಂಬುದನ್ನು ಈ ಸಂದರ್ಭ ನಮಗೆ ಮನದಟ್ಟು ಮಾಡುತ್ತದೆ ಎಂದು ಅವರು ತಿಳಿಸಿದರು.
ಕ್ರಿಮಿನಲ್ ಸ್ವರೂಪದ ಪ್ರಕರಣಗಳಲ್ಲಿ ಹೆಚ್ಚಿನ ಆಸಕ್ತಿ ನಿಮ್ಮಲ್ಲಿದ್ದರೆ ಹಿರಿಯ ವಕೀಲರು ಪಾಟೀ ಸವಾಲಿನ ಪ್ರಶ್ನೆಗಳನ್ನು ಸಾಕ್ಷಿದಾರರಿಗೆ ಹೇಗೆ ಕೇಳುತ್ತಾರೆ ಎಂಬುದನ್ನು ನ್ಯಾಯಾಲಯದಲ್ಲಿ ಕಲಿಯಬಹುದು. ಪಾಟೀ ಸವಾಲಿನಂತಹ ಹಂತಗಳಲ್ಲಿ ನ್ಯಾಯವಾದಿಗಳು ಪೂರ್ವ ನಿರ್ಧಾರಿತ ಪ್ರಶ್ನೆಗಳಿಗಿಂತ ಸ್ಥಳದಲ್ಲಿಯೇ ಹಠಾತ್ ಸಾಕ್ಷಿದಾರ ಕೊಟ್ಟ ಉತ್ತರದಿಂದಲೇ ಪ್ರಶ್ನೆಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಹಿರಿಯ ನುರಿತ ವಕೀಲರ ತಮ್ಮ ಅನುಭವದ ಆಧಾರದ ಮೇಲೆ ಕೇಳುವ ಪ್ರಶ್ನೆಗಳು ಯುವ ವಕೀಲರಿಗೆ ನೆರವಾಗಬಲ್ಲದು ಎಂದು ಅವರು ಹೇಳಿದರು.
ನಿರಂತರ ಓದು, ಕಲಿಕೆ, ವಿನಯ, ವಿವೇಕಗಳು ವಕೀಲಿ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರತಿಯೊಬ್ಬ ಯುವ ನ್ಯಾಯವಾದಿಗಳಲ್ಲಿ ಅನಿವಾರ್ಯವೆಂಬಂತೆ ಇರಲೇಬೇಕು. ಈ ವೃತ್ತಿಯ ಆರಂಭದ ದಿನಗಳಲ್ಲಿ ನಿಮಗೆ ನೀವು ನಿರೀಕ್ಷಿಸಿದಷ್ಟು ದುಡ್ಡು ಯಶಸ್ಸು ಸಿಗದೇ ಇರಬಹುದು. ಆದರೆ ನಿರಂತರ ಶ್ರಮ, ಕಲಿಯುವ ಮತ್ತು ಕಲಿತದ್ದನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ವಿವೇಚನೆ ಮಾತ್ರ ನಿಮ್ಮನ್ನು ಗೆಲುವಿನ ದಡ ಮುಟ್ಟಿಸಬಲ್ಲದು ಎಂದು ಅವರು ಸಲಹೆ ನೀಡಿದರು.
ಈ ಕಾರ್ಯಾಗಾರದಲ್ಲಿ ಬೆಂಗಳೂರು ವಲಯ ಒಂದರ ವಿವಿಧ ಕಾನೂನು ಕಾಲೇಜುಗಳಿಂದ 50 ಹೆಚ್ಚಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಕರ್ನಾಟಕ ರಾಜ್ಯ ಕಾನೂನು ವಿವಿ ಕಾರ್ಯಕ್ರಮ ಸಂಯೋಜಕ ಆರ್. ಮೋಹನ್, ವಿದ್ಯಾವರ್ಧಕ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಡಾ. ಶ್ರೀದೇವಿ ಕೃಷ್ಣ ಇದ್ದರು.
ಕೋಟ್...
ಈ ಹಿಂದೆ ಕಾನೂನು ವೃತ್ತಿಗೆ ಬರುವವರಲ್ಲಿ ವಾದ ಮಾಡುವ ಕೌಶಲ್ಯದ ಜೊತೆಗೆ ಡ್ರಾಫ್ಟಿಂಗ್ ನೈಪುಣ್ಯವೂ ಇರಲೇಬೇಕಾಗಿತ್ತು. ಈಗ ಇವೆರಡರ ಜೊತೆಗೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಕಂಪ್ಯೂಟರ್ ಜ್ಞಾನ ಇರಲೇಬೇಕಾದುದು ಅನಿವಾರ್ಯವಾಗಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಾಲಯಗಳಿಗೂ ಕಾಲಿಟ್ಟಿರುವುದರಿಂದ ಆರ್ಟಿಫಿಶಿಯಲ್ ತಂತ್ರಜ್ಞಾನದ ಕಲಿಕೆಯತ್ತಲೂ ಯುವ ವಕೀಲರು ಗಮನ ಕೊಡಬೇಕಿದೆ.- ರವೀಂದ್ರ ಹೆಗಡೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು