ಮುದ್ರಣ ಮಾಧ್ಯಮವೇ ಅತ್ಯಂತ ವಿಶ್ವಾಸಾರ್ಹ: ರವಿಶಂಕರ್ ಭಟ್

KannadaprabhaNewsNetwork | Published : Mar 20, 2024 1:18 AM

ಸಾರಾಂಶ

24*7 ಸುದ್ದಿ ಚಾನೆಲ್‍ಗಳು ಮತ್ತು ಆನ್‍ಲೈನ್ ನ್ಯೂಸ್‍ ಪೋರ್ಟಲ್‍ಗಳ ಕಾಲದಲ್ಲಿಯೂ ಮುದ್ರಣ ಮಾಧ್ಯಮವೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮವಾಗಿದ್ದು, ಇದಕ್ಕೆ ಪರ್ಯಾಯವಿಲ್ಲ. ದಿನಪತ್ರಿಕೆಗಳು ಮಾತ್ರವೇ ವೈವಿಧ್ಯಮಯವಾದ ವಿಷಯ ಮತ್ತು ದೃಷ್ಟಿಕೋನಗಳನ್ನು ನೀಡುವ ಸಶಕ್ತ ಸಾಧನಗಳು ಎಂದು ಪತ್ರಕರ್ತ ರವಿಶಂಕರ್ ಭಟ್ ಶಿವಮೊಗ್ಗ ಕುವೆಂಪು ವಿವಿ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

24*7 ಸುದ್ದಿ ಚಾನೆಲ್‍ಗಳು ಮತ್ತು ಆನ್‍ಲೈನ್ ನ್ಯೂಸ್‍ ಪೋರ್ಟಲ್‍ಗಳ ಕಾಲದಲ್ಲಿಯೂ ಮುದ್ರಣ ಮಾಧ್ಯಮವೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮವಾಗಿದ್ದು, ಇದಕ್ಕೆ ಪರ್ಯಾಯವಿಲ್ಲ ಎಂದು ಪತ್ರಕರ್ತ ರವಿಶಂಕರ್ ಭಟ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘಗಳ ಜಂಟಿ ಸಹಯೋಗದಲ್ಲಿ ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮುದ್ರಣ ಮಾಧ್ಯಮದ ಪ್ರಸ್ತುತತೆ’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.

ದಿನಪತ್ರಿಕೆಗಳು ಮಾತ್ರವೇ ವೈವಿಧ್ಯಮಯವಾದ ವಿಷಯ ಮತ್ತು ದೃಷ್ಟಿಕೋನಗಳನ್ನು ನೀಡುವ ಸಶಕ್ತ ಸಾಧನಗಳು. ವಿವಿಧ ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್, ಗೂಗಲ್‍ನಂತಹ ನ್ಯೂಸ್ ಫೀಡರ್‌ಗಳಲ್ಲಿ ಪಡೆಯುವ ಸುದ್ದಿಗಳು ಒಮ್ಮುಖದ ವಾದ, ಆಲೋಚನಾ ಕ್ರಮ, ಆಭಿರುಚಿಗಳನ್ನು ಬಿತ್ತುತ್ತವೆ. ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ನ್ಯೂಸ್ ಆಲ್ಗಾರಿದಂಗಳ ಪ್ರಕ್ರಿಯೆಯೇ ಇದಕ್ಕೆ ಕಾರಣ ಎಂದರು.

ಟಿವಿ ಚಾನಲ್‍ಗಳು ಬ್ರೇಕಿಂಗ್ ಮೌಲ್ಯ ಆಧರಿಸಿ ಸುದ್ದಿಗಳ ಹಿಂದೆ ಬೀಳುತ್ತವೆ. ಡಿಜಿಟಲ್ ಸುದ್ದಿ ತಾಣಗಳು ಕ್ಲಿಕ್, ಶೇರ್, ವ್ಯೂವ್‍ಗಳ ಗಳಿಸುವ ದೃಷ್ಟಿಕೋನದಲ್ಲಿ ಮತ್ತು ಆವಸರದಲ್ಲಿ ಸುದ್ದಿಗಳನ್ನು ರೂಪಿಸುತ್ತವೆ. ವೈಭವೀಕೃತ ಆಯಾಮಗಳನ್ನು ಹುಡುಕಿ ವಿಷಯ (ಕಂಟೆಂಟ್ ಕ್ರಿಯೇಷನ್) ರೂಪಿಸುತ್ತಾರೆ. ಮುದ್ರಣ ಮಾಧ್ಯಮವು ಸುದ್ದಿಗೆ ಇರಬಹುದಾದ ಸಮಗ್ರ ಆಯಾಮಗಳನ್ನು ತರ್ಕಿಸಿ, ಬರವಣಿಗೆಯ ಶೈಲಿ, ಓದುಗರ ಸದಭಿರುಚಿಗಳನ್ನು ಗಮನದಲ್ಲಿರಿಸಿಕೊಂಡು ವಸ್ತುನಿಷ್ಠ, ವಿಶ್ವಾಸಾರ್ಹ ಮಾದರಿಯಲ್ಲಿ ಸುದ್ದಿ ನೀಡುತ್ತವೆ ಎಂದು ತಿಳಿಸಿದರು.

ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲ ವಯೋಮಾನದವರಿಗೂ ಮಾಹಿತಿ ಒತ್ತು ತರುವುದು ಸುದ್ದಿಪತ್ರಿಕೆಗಳು ಮಾತ್ರ. ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಹಿನ್ನಲೆಯುಳ್ಳವರೇ ಇಂದು ಟಿವಿ ಮಾಧ್ಯಮಗಳಲ್ಲಿ ಯಶಸ್ವಿ ಪತ್ರಕರ್ತರು, ಆಂಕರ್‌ಗಗಳು ಎನಿಸಿಕೊಂಡಿರುವುದು. ಚಾನಲ್‍ಗಳು, ವೆಬ್‍ತಾಣಗಳು ಸಹ ಪತ್ರಿಕೆಗಳ ಮೇಲೆಯೇ ತಮ್ಮ ಸುದ್ದಿ, ಮಾಹಿತಿಗಾಗಿ ಅವಲಂಬಿತವಾಗಿವೆ. ಪತ್ರಕರ್ತ ಮತ್ತು ಓದುಗ ಇಬ್ಬರ ಹಿತ, ಬೆಳವಣಿಗೆಗೆ ದಿನಪತ್ರಿಕಗಳೇ ಬುನಾದಿ. ಕಾಲಕಾಲಕ್ಕೆ ಎದುರಾಗುವ ತಂತ್ರಜ್ಞಾನ ಸವಾಲುಗಳನ್ನು ಇ-ಪೇಪರ್, ನ್ಯೂಸ್ ವೆಬ್‍ಸೈಟ್, ಅಪ್ಲಿಕೇಶನ್, ಯೂಟೂಬ್‍ಗಳ ಮೂಲಕ ರೂಪಾಂತರ ಹೊಂದುತ್ತಾ ಹೊಸ ಒಳನೋಟದ, ವಿಶ್ಲೇಷಣಾತ್ಮಕ ಅಯಾಮದ ಸುದ್ದಿಪ್ರಸ್ತುತಿ ಮೂಲಕ ಹೆಚ್ಚೆಚ್ಚು ಪ್ರಸ್ತುತವಾಗುತ್ತಿದೆ. ಹೀಗಾಗಿ, ವಿಶ್ವಾಸಾರ್ಹ ಮಾಹಿತಿಗಾಗಿ ಇಂದಿಗೂ ಮುದ್ರಣ ಮಾಧ್ಯಮವೇ ಪ್ರಮುಖವಾದುದು. ಅದಕ್ಕೆ ಪರ್ಯಾಯವೇ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷ ಪ್ರೊ. ಎಂ.ಆರ್‌. ಸತ್ಯಪ್ರಕಾಶ್, ಪ್ರೊ. ಸತೀಶ್ ಕುಮಾರ್, ಪ್ರೊ.ವರ್ಗೀಸ್, ಸಂಘದ ಕಾರ್ಯದರ್ಶಿ ಶರತ್‍ಕುಮಾರ್ ಇದ್ದರು.

- - - -19ಎಸ್‌ಎಂಜಿಕೆಪಿ06:

ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ರವಿಶಂಕರ್ ಭಟ್ ಅವರನ್ನು ಅಭಿನಂದಿಸಲಾಯಿತು.

Share this article