ಕರಪತ್ರ, ಪೋಸ್ಟರ್‌ನಲ್ಲಿ ಮುದ್ರಕರ ಮಾಹಿತಿ ಕಡ್ಡಾಯ: ನಲಿನ್ ಅತುಲ್

KannadaprabhaNewsNetwork |  
Published : Apr 05, 2024, 01:04 AM IST
4ಕೆಪಿಎಲ್21 ಲೋಕಸಭಾ ಚುನಾವಣೆ-2024ರ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಪ್ರತಿನಿಧಿಗಳ ಸಭೆ | Kannada Prabha

ಸಾರಾಂಶ

ರಾಜಕೀಯ ಅಭ್ಯರ್ಥಿಗಳ ಕರಪತ್ರ, ಫಲಕಗಳು, ಪೋಸ್ಟರ್‌ಗಳಲ್ಲಿ ಮುದ್ರಕರು, ಪ್ರಕಾಶಕರು ಹಾಗೂ ಮುದ್ರಣದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು

ಲೋಕಸಭಾ ಚುನಾವಣೆ: ಪ್ರಿಂಟಿಂಗ್ ಪ್ರೆಸ್ ಮಾಲೀಕರ, ಪ್ರತಿನಿಧಿಗಳ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಚುನಾವಣೆ-2024ರ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಫಲಕಗಳು, ಪೋಸ್ಟರ್‌ಗಳಲ್ಲಿ ಮುದ್ರಕರು, ಪ್ರಕಾಶಕರು ಹಾಗೂ ಮುದ್ರಣದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಸೌರ್ಹದತೆಗೆ ಧಕ್ಕೆ ತರುವ ಕರಪತ್ರ, ಫಲಕಗಳು, ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ. ಈ ಹಿನ್ನೆಲೆ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮುದ್ರಕರು ಪಾಂಪ್ಲೇಟ್‌ಗಳು ಮತ್ತು ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಮುದ್ರಣಕ್ಕೆ ನೀಡುವವರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಲೇಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ಯಾವುದೇ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು.

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಬ್ಯಾನರ್, ಫ್ಲೆಕ್ಸ್, ಕರಪತ್ರ ಮುದ್ರಣವಾಗದೇ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 127 ಎ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಎಲ್ಲ ಪ್ರಿಂಟಿಂಗ್ ಪ್ರೆಸ್‌ನವರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುದ್ರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, ಕರಪತ್ರ, ಫಲಕ ಪೋಸ್ಟರ್, ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಯಾವುದೇ ಜಾತಿ, ಧರ್ಮದ ಜನರ ಭಾವನೆಗೆ ಧಕ್ಕೆ ತರುವ ವಿಷಯವನ್ನು ಮುದ್ರಿಸಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ರವಿಕುಮಾರ ವಸ್ತ್ರದ್, ಜಿಲ್ಲಾ ವಾರ್ತಾಧಿಕಾರಿ ಕೆ.ಎನ್. ರಮೇಶ ಸೇರಿದಂತೆ ಜಿಲ್ಲೆಯ ವಿವಿಧ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನಾಂಶ: ಕೌಟುಂಬಿಕ ಕೋರ್ಟ್‌ ಆದೇಶ ರದ್ದುಪಡಿಸಿ ಕೇಸ್‌ ವಾಪಸ್‌
ಮೇ 17ಕ್ಕೆ ಅಂಡಮಾನ್‌ಗೆ ಮಾನ್ಸೂನ್‌ ಪ್ರವೇಶ