ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಮೊದಲ ಬರದಿಂದ ಬೆಂದು ಹೋಗಿರುವ ರೈತರು ಹಾಗೂ ಇತರ ಸಮುದಾಯ ಜೀವನ ನಡೆಸಲು ಹೆಣಗಾಡುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ಛಾಪಾ ಕಾಗದ ದರವನ್ನು ಐದುಪಟ್ಟು ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆಂದತಾಗಿದೆ. ಅದರಲ್ಲೂ ದರ ಕುಸಿತದಿಂದ ಕಂಗಾಲಾಗಿರುವ ನೇಕಾರರ ಬದಕು ಭಾರವಾಗಿಸಿದೆ.
ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ಪಂಚ ಗ್ಯಾರಂಟಿಯ ವಿತ್ತೀಯ ಕೊರತೆ ಸರಿದೂಗಿಸಲು ಸರ್ಕಾರ ಹೆಣಗಾಡುತ್ತಿದೆ. ಆದಾಯ ಹೆಚ್ಚಿಸಿಕೊಳ್ಳಲು ಈಗಾಗಲೇ ಮುಂದ್ರಾಂಕ ಹಾಗೂ ನೋಂದಣಿ ಶುಲ್ಕ ಹೆಚ್ಚಿಸಿದೆ. ಇದೀಗ ಬಾಂಡ್ (ಛಾಪಾ ಕಾಗದ) ಮೇಲೆ ಕಣ್ಣು ಬಿದ್ದಿದ್ದು, ಇದು ತಾಲೂಕಿನ ಎಲ್ಲ ವಿಧದ ಗ್ರಾಹಕರು ಹಾಗೂ ನೇಕಾರ ವರ್ಗಕ್ಕೆ ಭಾರಿ ಹೊರೆಯಾಗಿದ್ದು , ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು ಎಂದು ಪರಿತಪಿಸುವಂತಾಗಿದೆ.ಮೊದಲೇ ಮಾರುಕಟ್ಟೆಯಿಲ್ಲದೆ ನೆಲಕಚ್ಚಿರುವ ಜವಳಿ ಕ್ಷೇತ್ರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಸವಾಲಾಗಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜೀವನವೆಚ್ಚ ದುಬಾರಿಯಾಗಿದೆ. ಅದರಲ್ಲೂ ನೇಕಾರಿಕೆ ಉದ್ಯಮ ನೆಲಕಚ್ಚಿದ್ದು, ಸಹಾಯ ಹಸ್ತ ನೀಡಿ ಎತ್ತಿ ಹಿಡಿಯಬೇಕಿದ್ದ ಸರ್ಕಾರವೇ ನೇಕಾರರ ಜೇಬಿಗೆ ಕತ್ತರಿ ಹಾಕುತ್ತಿರುವುದಕ್ಕೆ ನೇಕಾರ ಸಮುದಾಯ ತೀವ್ರವಾಗಿ ವಿರೋಧಿಸಿದೆ.
ಮುಚ್ಚಳಿಕೆ ಪತ್ರ ಹಾಗೂ ಪ್ರಮಾಣ ಪತ್ರ ಹೀಗೆ ವಿವಿಧ ರೀತಿಯ ಬಾಂಡ್‌ಗಳನ್ನು ಖರೀದಿಸಲು ಈ ಮೊದಲು ₹ ೨೦, ₹೫೦ ಪಾವತಿಸಬೇಕಿತ್ತು. ಇದೀಗ ಅವುಗಳ ಮೂಲ ದರ ₹ ೧೦೦, ₹ ೫೦೦ ಬಾಂಡ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಸಮಸ್ಯೆ ಏನು? : ಜವಳಿ ಇಲಾಖೆ ಮಗ್ಗಗಳ ಬಾಡಿಗೆ, ಖರೀದಿ ಸೇರಿದಂತೆ ಇತರೆ ಇಲಾಖೆಗಳ ಫಲಾನುಭವಿಯಾಗಲು ಸಬ್ಸಿಡಿ ಪಡೆಯಲು, ಸಹೋದರಶಾಸ್ತಿ ನಡುವೆ ಇಬ್ಭಾಗ ಮಾಡಿಕೊಳ್ಳಲು, ನೇಕಾರರು ವಿವಿಧ ರೀತಿಯ ವ್ಯವಹಾರಕ್ಕೆ ವಿವಿಧ ಇಲಾಖೆಗೆ ಬಾಂಡ್, ಮುಚ್ಚಳಿಕೆ ಪತ್ರ, ಪ್ರಮಾಣ ಪತ್ರ ಸಲ್ಲಿಸಬೇಕು. ಮೊದಲೇ ಬರದ ಹಿನ್ನಲೆಯಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸೀರೆಗಳ ಬೆಲೆ ತೀವ್ರ ಕುಸಿತಗೊಂಡು ನೇಕಾರರ ಪರಿಸ್ಥಿತಿ ಹದಗೆಟ್ಟಿದೆ. ಈ ನಡುವೆ ಸ್ಟಾಂಪ್ ದರಗಳನ್ನು ಸರ್ಕಾರ ನಾಲ್ಕೈದು ಪಟ್ಟು ಹೆಚ್ಚಿಸಿರುವುದು ನೇಕಾರರನ್ನು ಚಿಂತೆಗೀಡು ಮಾಡಿದೆ.
ದರ ೫ ಪಟ್ಟು ದರ ಹೆಚ್ಚಳ : ಸಾಮಾನ್ಯವಾಗಿ ಚಿಕ್ಕಪುಟ್ಟ ವ್ಯವಹಾರಗಳಿಗೆ ಹಾಗೂ ಸರ್ಕಾರಿ ಯೋಜನೆಗಳ ಪಡೆಯಲು ₹ ೨೦ ಸ್ಟಾಂಪ್ ಬಳಸಲಾಗುತ್ತಿತ್ತು. ಇದೀಕ ಛಾಪಾ ಕಾಗದ ದರ ಕನಿಷ್ಠ ₹ 100 ಆಗಿದೆ. ಜತೆಗೆ ಶೇ.೦.೧ರಷ್ಟಿದ್ದ ಶುಲ್ಕವನ್ನು ಶೇ.೦.೫ ರಷ್ಟು ಹೆಚ್ಚಿಸಿದೆ. ವಿವಿಧ ಪ್ರಾಧಿಕಾರದಿಂದ ಕೇಳಲ್ಪಡುವ ಮುಚ್ಚಳಿಕೆ ಪತ್ರ, ದತ್ತಕ ಪತ್ರ, ಜನನ-ಮರಣ ಪ್ರಮಾಣ ಪತ್ರ, ಮೂಲ ದಾಖಲೆ ಪಡೆಯಲು, ಕೋರ್ಟ್ ಅಫಿಡಿವಿಟ್ ಸಲ್ಲಿಸಲು ಇನ್ಮುಂದೆ ₹ ೧೦೦ ಸ್ಟಾಂಪ್ ಕಡ್ಡಾಯವಾಗಿದೆ.----ಸರ್ಕಾರ ಮುದ್ರಾಂಕ, ನೋಂದಣಿ ಹಾಗೂ ಛಾಪಾ ಕಾಗದ ದರ ಐದು ಪಟ್ಟು ಹೆಚ್ಚಳ ಮಾಡಿರುವುದು ನೇಕಾರರಿಗೆ ಭಾರೀ ಹೊರೆಯಾಗಿದೆ. ರಾಜ್ಯ ಸರ್ಕಾರ ಮುದ್ರಾಂಕ, ನೋಂದಣಿ ಶುಲ್ಕ ಏರಿಕೆ ಮರುಪರಿಶೀಲನೆ ನಡೆಸಿ ನೇಕಾರ ಸಮುದಾಯಕ್ಕೆ ಕಡಿಮೆ ದರ ನಿಗದಿ ಮಾಡಬೇಕು.
-ಶಂಕರ ಜಾಲಿಗಿಡದ ಅಧ್ಯಕ್ಷ ಪಾವರಲೂಮ್ ಮಾಲೀಕರ ಸಂಘ ಬನಹಟ್ಟಿ