ಮಡಿಕೇರಿ : ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ 30 ವರ್ಷಗಳಲ್ಲಿ ಈ ಬಾರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲೆಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ ನೀಡಿದ್ದಾರೆ. ಅರಣ್ಯ ಇಲಾಖೆ, ಕೊಡಗು ವೃತ್ತ ಮಡಿಕೇರಿ ವತಿಯಿಂದ ನಗರದ ಅರಣ್ಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲೂ ಸಹ ಮಳೆಯಾಗುತ್ತಿತ್ತು. ಆದರೆ ಈಗ ಮಳೆ ಇಲ್ಲದಂತಾಗಿ, ಬೇಸಿಗೆ ವಾತಾವರಣ ಕಾಣುತ್ತಿದೆ. ಎಂದು ಜಿಲ್ಲಾಧಿಕಾರಿ ಪ್ರತಿಪಾದಿಸಿದರು. ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಮಾತನಾಡಿ ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹ ಕೈಜೋಡಿಸಬೇಕು ಎಂದು ಕೋರಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್ ಅವರು 1966 ರಿಂದ ಇಲ್ಲಿಯವರೆಗೆ ಅರಣ್ಯ ಸಂರಕ್ಷಣೆ ಕರ್ತವ್ಯ ಸಂದರ್ಭದಲ್ಲಿ ಹುತಾತ್ಮರಾದ ಅರಣ್ಯ ರಕ್ಷಕ 65 ಮಂದಿ ಹೆಸರನ್ನು ಓದಿದರು.
ಕರ್ನಾಟಕ ಅರಣ್ಯ ಇಲಾಖೆ ಕೊಡಗು ವೃತ್ತ ಮಡಿಕೇರಿ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಗರದ ಅರಣ್ಯ ಭವನ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್, ಉಪ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ತಹಶೀನ್ ಬಾನು ದವಡಿ, ಕೆ.ಪಿ.ಗೋಪಾಲ್, ಸಂದೀಪ್ ಪಿ.ಅಭಯಂಕರ್, ಶ್ರೀನಿವಾಸ್ ನಾಯಕ್, ವಿ. ಸೆಂದಿಲ್ ಕುಮಾರ್, ನಿವೃತ್ತ ಉಪ ಅರಣ್ಯ ಸಂರಕ್ಷಾಧಿಕಾರಿ ಜಯ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ವಲಯ ಅರಣ್ಯಾಧಿಕಾರಿ ಶಂಕರ, ಪತ್ರಾಂಕಿತ ವ್ಯವಸ್ಥಾಪಕರಾದ ಸರೋಜ ಪಿ.ಪಿ., ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಕೆ.ಎಸ್., ಆನೆ ಜಮೇದಾರ್ ಬೋಜಪ್ಪ ಜೆ.ಕೆ., ಗಸ್ತು ಅರಣ್ಯ ಪಾಲಕ ನಾಗರಾಜ ರಡರಟ್ಟಿ, ಆನೆ ಮಾವುತ ಪುಟ್ಟ ಜೆ.ಎಂ., ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್, ಆನೆ ಕಾವಡಿಗ ಭರತ್ ನಾಯಕ್, ದಲಾಯತ್ ನೌಕರ ಬಸವರಾಜ್, ಅರಣ್ಯ ವೀಕ್ಷಕ ಸಚಿನ್ ತಳವಾರ, ಕ್ಷೇಮಾಭಿವೃದ್ಧಿ ನೌಕರ ಮೇದಪ್ಪ, ಆರ್‌ಆರ್‌ಟಿ ತಂಡದ ಕಾರ್ತಿಕ್, ಹೊರಗುತ್ತಿಗೆ ನೌಕರರ ಪರವಾಗಿ ದೀಪಕ್, ವಾಹನ ಚಾಲಕರ ಪರವಾಗಿ ಮಣಿ, ಪೊಲೀಸ್ ಸಿಬ್ಬಂದಿಗಳ ಪರವಾಗಿ ಚೆನ್ನಕೇಶವ ಅವರು ಅರಣ್ಯ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ಮುಖ್ಯ ಅತಿಥಿಗಳಿಗೆ ಪೆರೇಡ್ ಕಮಾಂಡರ್ ಸದಾನಂದ ಹಿಪ್ಪರಗಿ ಅವರು ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂದದಿಂದ ರಾಷ್ಟ್ರಗೀತೆ ನುಡಿಸಲಾಯಿತು. ಅರಣ್ಯ ವನ್ಯಜೀವಿ ಸಂಪತ್ತನ್ನು ಉಳಿಸಲು ಹೋರಾಡಿ ಮಡಿದವರ ಗೌರವಾರ್ಥ ರಿವರ್ಸ್ ಆರ್ಮಸ್ ನುಡಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ವೃಂದದಿಂದ ಅಬೈಡ್ ವಿತ್ ಮೀ ವಾದ್ಯವನ್ನು ನುಡಿಸಲಾಯಿತು. ಡಿಆರ್‌ಎಫ್‌ಒ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿ, ವಂದಿಸಿದರು.