ಹಿರೇಕೆರೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ 12ನೇ ಶತಮಾನದ ಶರಣ ಶರಣೆಯರ ವಚನಗಳಲ್ಲಿ ಇರುವ ಸಾರವನ್ನು ತಿಳಿಸುವುದರ ಮೂಲಕ ಪ್ರತಿಯೊಬ್ಬರಲ್ಲಿ ಧಾರ್ಮಿಕ ಚಿಂತನೆಗಳು ಆಧ್ಯಾತ್ಮಿಕ ವಿಚಾರಗಳನ್ನು ಜೀವಂತವಾಗಿರಿಸುತ್ತಾ ಬಂದಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಸಮಾಜವನ್ನು 12ನೇ ಶತಮಾನದಲ್ಲಿ ಶರಣ ಶರಣೆಯರು ಹೇಗೆ ಸುಧಾರಿಸಿದರು ಎಂಬುದನ್ನು ಮೆಲುಕು ಹಾಕುವ ದಿಸೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಕ್ಕಮಹಾದೇವಿ ಅಲ್ಲಮಪ್ರಭು, ಕ್ರಾಂತಿಯೋಗಿ ಬಸವಣ್ಣ ಡೋಹರ ಕಕ್ಕಯ್ಯ, ಮೊದಲಾದವರು ತಮ್ಮ ವಚನಗಳಲ್ಲಿ ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಸಾಮಾಜಿಕ ಅಸಮಾನತೆ, ಮೊದಲಾದವುಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಮುಂದಿನ ಭಾವಿ ಶಿಕ್ಷಕರಾದ ತಾವು ಈ ಸಮಾಜದಲ್ಲಿ ವಾಸಿಸುವ ಪ್ರತಿ ಮಗುವನ್ನ ತಿದ್ದಿ ಅಕ್ಷರ ಜ್ಞಾನ, ಸಂಸ್ಕಾರವನ್ನ ಕೊಡುವ ತಾವುಗಳು ಸಮಾಜದ ಭವಿಷ್ಯದ ಶಿಲ್ಪಿಗಳನ್ನಾಗಿ ಮಾಡುತ್ತೀದ್ದೀರಿ. ಕಾಯಕಯೋಗಿ ಬಸವಣ್ಣನವರ ಕುರಿತು ಉಪನ್ಯಾಸವನ್ನು ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡು ಅದರಂತೆ ಮುಂದಿನ ನಿಮ್ಮ ಭಾವಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಹಾಗೂ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ ಇಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಉತ್ತಮ ಕೆಲಸ ಮಾಡುತ್ತಿದೆ. ಈ ಪರಿಷತ್ತಿಗೆ ಸದಾ ನನ್ನ ಮಾರ್ಗದರ್ಶನ ಇರುತ್ತದೆ ಎಂದು ಹೇಳಿದರು.
ನೂಲಗೇರಿ ಪಬ್ಲಿಕ್ ಶಾಲೆಯ ಉಪಪ್ರಾಚಾರ್ಯ ನಾಗರಾಜ ಪುರದ ಅವರು, ಕಾಯಕಯೋಗಿ ಬಸವಣ್ಣನವರ ಕುರಿತು ಉಪನ್ಯಾಸ ನೀಡುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಶರಣ ಶರಣಿಯರು ಸೇರಿ ಅಂದಿನ ಕಾಲದಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಪ್ರತಿಯೊಬ್ಬರು ಬಸವಣ್ಣನವರ ಕಾಯಕ ನಿಷ್ಠೆಯನ್ನು ಪಾಲಿಸಬೇಕು ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಸಿಇಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಹಾಗೂ ಪ್ರಾಸ್ತಾವಿಕವಾಗಿ ಹಾವೇರಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎನ್. ಸುರೇಶಕುಮಾರ್ ಮಾತನಾಡಿದರು.
ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಬಿ. ಜೋಗಿಹಳ್ಳಿ, ಎಸ್.ಎಸ್. ಕೋರಿಗೌಡ್ರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್.ಸಾಲಿ, ಪ್ರಾಚಾರ್ಯ ದಾನೇಶ ತುಮ್ಮಿನಕಟ್ಟಿ, ಎನ್.ಎಸ್. ಹೆಗ್ಗೇರಿ, ಬಸವರಾಜ ಪೂಜಾರ, ಬಿ.ವಿ. ಸೊರಟೂರು, ಕೆ.ಜಿ. ಮಡಿವಾಳರ ಹಾಗೂ ಕಸಾಪ ಪದಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಯವರು ಇದ್ದರು.