ಸರ್ಕಾರಿ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಿ

KannadaprabhaNewsNetwork |  
Published : Oct 20, 2024, 01:49 AM IST

ಸಾರಾಂಶ

ಹರಿಹರ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎಂ.ವಿ. ವೆಂಕಟೇಶ್ ಸೂಚಿಸಿದರು.

- ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಸೂಚನೆ - - - ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎಂ.ವಿ. ವೆಂಕಟೇಶ್ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಅನುದಾನಗಳನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಬೇಕು ಎಂದರು.

ಸಭೆಗೆ ಬಹಳಷ್ಟು ಅಧಿಕಾರಿಗಳು ಸಂಪೂರ್ಣ ಮಾಹಿತಿ ತರುವಲ್ಲಿ ವಿಫಲರಾಗಿದ್ದೀರಿ. ಮುಂದಿನ ಸಭೆಗಳಲ್ಲಿ ಅನುದಾನದ ಮಾಹಿತಿ ಜೊತೆಗೆ, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ತರಬೇಕು. ಯಾವುದೇ ಕಾರಣಕ್ಕೂ ಸಹಾಯಕರನ್ನು ಸಭೆಗೆ ಕಳಿಸಬಾರದು. ಮುಖ್ಯ ಕೆಲಸ ಇದ್ದಲ್ಲಿ ಇಒ ಅವರಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದರು.

ತಾಪಂ ಇಒ ಎಸ್.ಸಿ. ಸುಮಲತಾ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಉತ್ತರ ಪ್ರತ್ಯುತ್ತರಗಳ ಮಾಹಿತಿ ನೀಡಿ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಕೃಷ್ಣ ಮಾತನಾಡಿ, ಕಳೆದ ಡಿಸೆಂಬರ್ ತಿಂಗಳಿಗೆ ಅನುದಾನ ಮುಗಿದಿದ್ದು, ಗುತ್ತಿಗೆದಾರರೇ ತಮ್ಮ ಸ್ವಂತ ಹಣದಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಬಿಸಿಎಂ ಇಲಾಖೆಯ ಅಸ್ಮ ಭಾನು ಮಾತನಾಡಿ, ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಬೇಡಿಕೆ ಇದ್ದು, 70 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶ ಅವಕಾಶ ನೀಡಲಾಗಿದೆ ಎಂದರು. ಕೃಷಿ ಇಲಾಖೆ ಅಧಿಕಾರಿ ಎ. ನಾರನಗೌಡ ಮಾತನಾಡಿ, ಕೃಷಿ ಹೊಂಡ, ತುಂತುರು ಹನಿ ನೀರಾವರಿ ಇತ್ಯಾದಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.

ಅಕ್ಷರ ದಾಸೋಹ ಅಧಿಕಾರಿ ಆರ್. ವೀರೇಶ್ ಮಾತನಾಡಿ, ತಾಲೂಕಿನಲ್ಲಿರುವ 205 ಶಾಲೆಗಳಿಗೆ ಸುಮಾರು 23, 205 ವಿದ್ಯಾರ್ಥಿಗಳಿಗೆ ಬಿಸಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ ಎಂದರು. ತಾಲೂಕು ಆರೋಗ್ಯ ಅಧಿಕಾರಿಗಳ ಪರವಾಗಿ ಆಗಮಿಸಿದ ಡಾ. ಪ್ರಶಾಂತ್ ತಾಲೂಕಿನಲ್ಲಿ ಡೆಂಘೀಜ್ವರ, ಕ್ಷಯರೋಗ ಹಾಗೂ ಆನೆಕಾಲು ರೋಗದ ಬಗ್ಗೆ ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಕವಿತಾ, ಇದುವರೆಗೆ 28513 ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲಾಗಿದೆ. ತಪ್ಪು ಮಾಹಿತಿ ನೀಡಿ ನೋಂದಾಯಿಸಿದ್ದ 600 ಜನರ ಕಾರ್ಡುಗಳನ್ನು ಫ್ರೀಜ್ ಮಾಡಲಾಗಿದೆ. ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಶಿಕ್ಷಣ ಇಲಾಖೆಯ ಕೃಷ್ಣಪ್ಪ ಮಾತನಾಡಿ, ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಹಿನ್ನೆಲೆಯ ತಾಲೂಕಿನ ಎಲ್ಲ ಶಾಲೆಗಳ ಹೆಡ್‍ಮಾಸ್ತರ್‌ಗಳ ಜತೆ ಕಾಲಕಾಲಕ್ಕೆ ಸಭೆ ನಡೆಸಲಾಗುತ್ತಿದೆ. ವಿವಿಧ ರೀತಿಯ ಚಟುವಟಿಕೆ ಹೆಚ್ಚುವರಿ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಅಬಕಾರಿ ಇಲಾಖೆ ದೇವಾನಂದ್, ಜಿಪಂ ಎಂಜಿನಿಯರಿಂಗ್ ವಿಭಾಗದ ಗಿರೀಶ್, ಕೆ.ಆರ್.ಐ.ಡಿ.ಎಲ್.ನ ಸಂಗಮೇಶ್, ಬೆಸ್ಕಾಂ ಇಲಾಖೆ ಮಾರ್ಕಂಡೇಯ, ತೋಟಗಾರಿಕೆ ಇಲಾಖೆ ಶಶಿಧರ ಸ್ವಾಮಿ ಮುಂತಾದವರಿಂದ ಪ್ರಗತಿ ಕುರಿತ ಮಾಹಿತಿ ಪಡೆಯಲಾಯಿತು.

ಶಾಸಕ ಬಿ.ಪಿ. ಹರೀಶ್ ಕೆಲವೊತ್ತು ಸಭೆಯಲ್ಲಿ ಪಾಲ್ಗೊಂಡು, ಅನಂತರ ಕಾರ್ಯನಿಮಿತ್ತ ನಿರ್ಗಮಿಸಿದರು. ತಾಪಂ ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

- - -

ಬಾಕ್ಸ್‌ * 11900 ಹೊರ ರೋಗಿಗಳಿಗೆ ಚಿಕಿತ್ಸೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಲ್. ಹನುಮ ನಾಯಕ್ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಹಾಗೂ ಸಿಬ್ಬಂದಿ ಸಂಖ್ಯೆ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. 100 ಹಾಸಿಗೆ ಆಸ್ಪತ್ರೆಯಾಗಿದ್ದು, ಕಳೆದ ತಿಂಗಳು 11900 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 720 ಮಲೇರಿಯಾ ಮತ್ತು 750 ಡೆಂಘೀಜ್ವರ ಪರೀಕ್ಷೆ ನಡೆಸಲಾಗಿದೆ. ಹೆಚ್ಚಿನ ಮಳೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಆಗಿದ್ದು, ಕೆಲ ಹೊತ್ತು ತೊಂದರೆಯಾಗಿತ್ತು, ಈಗ ಸರಿಪಡಿಸಲಾಗಿದೆ ಎಂದರು.

- - - -15ಎಚ್‍ಆರ್‍ಆರ್1:

ಹರಿಹರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''