ಕದ್ರಾ ವ್ಯಾಪ್ತಿಯ ಜನರ ಸುರಕ್ಷತೆಗೆ ಆದ್ಯತೆ ನೀಡಿ: ಶಾಸಕ ಸತೀಶ ಸೈಲ್

KannadaprabhaNewsNetwork |  
Published : May 25, 2025, 01:48 AM IST
ಕದ್ರಾ ಜಲಾಶಯದ ಮೀಟಿಂಗ್‌ ನಡೆಸಿದ ಶಾಸಕ ಸತೀಶ ಸೈಲ್‌ | Kannada Prabha

ಸಾರಾಂಶ

ಮಳೆಗಾಲದ ಅವಧಿಯಲ್ಲಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುವ ಸಂದರ್ಭದಲ್ಲಿ ಈ ಭಾಗದ ಜನರಿಗೆ ಅಗತ್ಯ ಮುನ್ಸೂಚನೆ ನೀಡಬೇಕು.

ಕಾರವಾರ: ಮಳೆಗಾಲದ ಅವಧಿಯಲ್ಲಿ ಕದ್ರಾ ಜಲಾಶಯ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಮತ್ತು ಗ್ರಾಮಸ್ಥರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಶಾಸಕ ಸತೀಶ್ ಸೈಲ್ ಸೂಚನೆ ನೀಡಿದರು.ಅವರು ಶನಿವಾರ ಕದ್ರಾದ ಅಂಬೇಡ್ಕರ್ ಸಭಾ ಭವನದಲ್ಲಿ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ನಡೆದ ಕೆಪಿಸಿಎಲ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆಗಾಲದ ಅವಧಿಯಲ್ಲಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುವ ಸಂದರ್ಭದಲ್ಲಿ ಈ ಭಾಗದ ಜನರಿಗೆ ಅಗತ್ಯ ಮುನ್ಸೂಚನೆ ನೀಡಬೇಕು. ತುರ್ತು ಸಂದರ್ಭದಲ್ಲಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವಾಹನಗಳು, ಆ್ಯಂಬುಲೆನ್ಸ್ ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಪ್ರವಾಹ ಸಂದರ್ಭದಲ್ಲಿ ದೋಣಿಗಳ ಮೂಲಕ ಸ್ಥಳಾಂತರಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು ಎಂದರು.

ಪ್ರಸ್ತುತ ದಾಂಡೇಲಿಯಲ್ಲಿ ರಿವರ್ ರ್‍ಯಾಫ್ಟಿಂಗ್‌ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ರಿವರ್ ರ್‍ಯಾಫ್ಟಿಂಗ್‌ ಮಾಡುವವರ ಜೊತೆ ಚರ್ಚಿಸಿ ಅಲ್ಲಿನ ಕೆಲವು ಬೋಟ್‌ಗಳನ್ನು ಕದ್ರಾದಲ್ಲಿ ಇಡಲು ವ್ಯವಸ್ಥೆ ಮಾಡುವಂತೆ ಹಾಗೂ ಅವುಗಳನ್ನು ಇಡಲು ಸೂಕ್ತ ಸ್ಥಳವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಗೋವಾ ರಾಜ್ಯದ ಸಾಕಳಿ ನದಿಯ ನೀರು ಜಲಾಶಯಕ್ಕೆ ಬರುವುದರಿಂದ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವನ್ನು ಜಿಲ್ಲಾಡಳಿತ ಸೂಚಿಸಿರುವ ನಿರ್ದಿಷ್ಟ ಗರಿಷ್ಠ ಮಟ್ಟ ತಲುಪಿದಾಗ ಸ್ವಲ್ಪ ಸ್ವಲ್ಪವಾಗಿ ಬಿಡುಗಡೆಗೊಳಿಸಬೇಕು, ಒಂದೇ ಬಾರಿ ಗರಿಷ್ಠ ನೀರು ಬಿಡುಗಡೆ ಮಾಡಿ ಪ್ರವಾಹ ಪರಿಸ್ಥಿತಿ ಉಂಟು ಮಾಡಬಾರದು. ಈ ಜಲಾಶಯ ನಿರ್ಮಾಣಗೊಂಡು 30 ವರ್ಷಗಳಾಗಿದ್ದು, ಇದುವರೆಗೂ ಒಮ್ಮೆ ಕೂಡ ಜಲಾಶಯದಲ್ಲಿನ ಹೂಳು ತೆಗೆದಿಲ್ಲ. ಜಲಾಶಯದಲ್ಲಿ ಶೇಖರಣೆಯಾಗಿರುವ ನಿಖರವಾದ ನೀರಿನ ಪ್ರಮಾಣ ತಿಳಿಯುತ್ತಿಲ್ಲ. ಈ ಬಗ್ಗೆ ತಜ್ಞರಿಂದ ವರದಿ ಪಡೆಯುವಂತೆ ಮತ್ತು ನೀರಿನ ಒಳ ಹರಿವಿನ ಕುರಿತು ಅಧ್ಯಯನ ವರದಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವಂತೆ ಸೂಚಿಸಿದ ಅವರು, ಕೆಪಿಸಿಎಲ್ ಕಾಲೋನಿ ಮೂಲಕ ಸ್ಥಳೀಯರಿಗೆ ಸಂಚರಿಸಲು ಸಂಪರ್ಕಿಸುವ ದಾರಿ ನಿರ್ಮಾಣಕ್ಕೆ ತಡೆಯೊಡ್ಡುತ್ತಿರುವ ಕುರಿತು ಸತೀಶ್ ಸೈಲ್ ಆಕ್ಷೇಪಿಸಿದರು.

ಸ್ಥಳೀಯರಿಗೆ ಸಂಚರಿಸಲು ರಸ್ತೆ ನಿರ್ಮಾಣ ಮಾಡಲು ತೊಂದರೆ ನೀಡದಂತೆ ಕೆಪಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಕಾಮಗಾರಿಯನ್ನು ಪುನಃ ಪ್ರಾರಂಭಿಸುವಂತೆ ಮತ್ತು ಕೆಪಿಸಿಎಲ್ ನಿಂದ ಇಲ್ಲಿನ ಸಾರ್ವಜನಿಕರಿಗೆ ಅನಗತ್ಯ ಸಮಸ್ಯೆಗಳು ಉಂಟಾಗದಂತೆ ಎಚ್ಚರವಹಿಸಿ, ಸಾರ್ವಜನಿಕರಿಗೆ ಅಗತ್ಯವಿರುವ ನೆರವು ನೀಡುವಂತೆ ನಿರ್ದೇಶನ ನೀಡಿದರು.

ಇಲ್ಲಿನ ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿನ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಶುದ್ದ ಕುಡಿಯುವ ನೀರು ಒದಗಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಕನಿಷ್ಕ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ, ಮಲ್ಲಾಪುರ ಗ್ರಾಪಂ ಅಧ್ಯಕ್ಷ ಉದಯ್ ಬಾಂದೇಕರ್, ಕದ್ರಾ ಗ್ರಾಪಂ ಅಧ್ಯಕ್ಷೆ ಹನುಮವ್ವ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ