ದಾವಣಗೆರೆಯ ಹೆಗ್ಗುರುತು ಉಳಿಸಿ ಅಭಿವೃದ್ಧಿಗೆ ಆದ್ಯತೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

KannadaprabhaNewsNetwork |  
Published : Nov 14, 2026, 01:45 AM IST
ಕ್ಯಾಪ್ಷನ13ಕೆಡಿವಿಜಿ36 ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನೂತನ ಫುಟ್‌ ಬಾಲ್‌ ಆಕೃತಿಯನ್ನು ಮಕ್ಕಳೊಂದಿಗೆ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ದಾವಣಗೆರೆ ನಗರದ ಐತಿಹಾಸಿಕ ಹೆಗ್ಗುರುತುಗಳನ್ನು ಸಂರಕ್ಷಿಸುವುದರೊಂದಿಗೆ ಆಧುನಿಕ ಮೂಲಸೌಕರ್ಯ ಕಲ್ಪಿಸಿ, ನಗರವನ್ನು ಮತ್ತಷ್ಟು ಸುಂದರಗೊಳಿಸುವುದು ನಮ್ಮ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರದ ಐತಿಹಾಸಿಕ ಹೆಗ್ಗುರುತುಗಳನ್ನು ಸಂರಕ್ಷಿಸುವುದರೊಂದಿಗೆ ಆಧುನಿಕ ಮೂಲಸೌಕರ್ಯ ಕಲ್ಪಿಸಿ, ನಗರವನ್ನು ಮತ್ತಷ್ಟು ಸುಂದರಗೊಳಿಸುವುದು ನಮ್ಮ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದ ಐತಿಹಾಸಿಕ ಗುಂಡಿ ಮಹದೇವಪ್ಪ ವೃತ್ತ (ಡಾ. ಎಂ.ಸಿ. ಮೋದಿ ವೃತ್ತ)ವನ್ನು ನವೀಕರಿಸಲಾಗಿದ್ದು, ಬುಧವಾರ ಪುಟಾಣಿ ಮಕ್ಕಳೊಂದಿಗೆ ನೂತನ ಫುಟ್ಬಾಲ್ ಆಕೃತಿ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 28 ವರ್ಷಗಳ ಹಿಂದೆ ಫಿಫಾ ಫುಟ್ಬಾಲ್ ವಿಶ್ವಕಪ್ ಸ್ಮರಣಾರ್ಥ ಈ ವೃತ್ತವನ್ನು ನಿರ್ಮಿಸಲಾಗಿತ್ತು. ಅಂದಿನಿಂದಲೂ ಇದು ದಾವಣಗೆರೆಯ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಕಾಲಕ್ರಮೇಣ ವೃತ್ತದ ಹೊರಭಾಗ ಶಿಥಿಲಗೊಂಡಿದ್ದರಿಂದ ಹಳೆಯ ಸ್ವರೂಪವನ್ನು ಉಳಿಸಿಕೊಂಡೇ ಆಧುನಿಕ ವಿನ್ಯಾಸದಲ್ಲಿ ಮರುನಿರ್ಮಿಸಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಲ್ಲ. ನಗರದ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದೂ ಮುಖ್ಯ. ಈ ನಿಟ್ಟಿನಲ್ಲಿ ಗುಂಡಿ ಮಹದೇವಪ್ಪ ವೃತ್ತದ ನವೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ’ ಎಂದರು.

900 ಕೆ.ಜಿ. ತೂಕದ ಫುಟ್ಬಾಲ್ ಕಲಾಕೃತಿ: ನವೀಕೃತ ವೃತ್ತದಲ್ಲಿ ಸುಮಾರು 900 ಕೆ.ಜಿ. ತೂಕದ ಸ್ಟೇನ್ಲೆಸ್ ಸ್ಟೀಲ್ ಫುಟ್ಬಾಲ್ ಕಲಾಕೃತಿಯನ್ನು ಅಳವಡಿಸಲಾಗಿದೆ. ಗ್ರೇಡ್ 304 ಸ್ಟೇನ್ಲೆಸ್ ಸ್ಟೀಲ್‌ ನಿಂದ ನಿರ್ಮಿಸಲಾದ ಫುಟ್ಬಾಲ್ ಅನ್ನು ಕಲಾತ್ಮಕ ಕೈಯ ಮೂರು ಬೆರಳುಗಳ ಮೇಲೆ ನಿಂತಿರುವಂತೆ ವಿನ್ಯಾಸಗೊಳಿಸಲಾಗಿದೆ.

ನಗರದ ಸೌಂದರ್ಯಕ್ಕೆ ಒತ್ತು: ದಾವಣಗೆರೆ ನಗರವು ಶಿಕ್ಷಣ, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯ. ನಗರದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ವೃತ್ತದ ಸುತ್ತ ಆಕರ್ಷಕ ವಿದ್ಯುತ್ ದೀಪಾಲಂಕಾರ, ಹಸಿರು ಪರಿಸರ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಫುಟ್ಬಾಲ್ ಕಲಾಕೃತಿ ಆಕರ್ಷಕವಾಗಿ ಕಂಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆಯ ಐತಿಹಾಸಿಕ ಗುಂಡಿ ಮಹದೇವಪ್ಪ ವೃತ್ತವು ನಗರದ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಪ್ರಮುಖ ಹೆಗ್ಗುರುತಾಗಿದೆ. ಸುಮಾರು 28 ವರ್ಷಗಳ ಇತಿಹಾಸ ಹೊಂದಿರುವ ಈ ವೃತ್ತಕ್ಕೆ ಆಧುನಿಕ ಸ್ಪರ್ಶ ನೀಡಿರುವುದು ಸಂತಸದ ಸಂಗತಿ. ನಗರದ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ. ವಿಶೇಷವಾಗಿ ಪುಟಾಣಿ ಮಕ್ಕಳೊಂದಿಗೆ ವೃತ್ತವನ್ನು ಉದ್ಘಾಟಿಸಿರುವುದು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಸಂದೇಶ ನೀಡುತ್ತದೆ. ದಾವಣಗೆರೆಯನ್ನು ಸ್ವಚ್ಛ, ಸುಂದರ ಹಾಗೂ ಸುಸಜ್ಜಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಸಮರ್ಥ್ ಶಾಮನೂರು, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ಜಿಲ್ಲಾ ಪಂಚಾಯ್ತಿ ಸಿಇಒ ಸಾಹಿತ್ಯ ಎಂ. ಆಲದಕಟ್ಟಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ