ಶ್ರೀಮಂತ ದೇಗುಲಗಳಿಂದ ಸಿ ಗ್ರೇಡ್‌ ದೇವಸ್ಥಾನ ಅಭಿವೃದ್ಧಿಗೆ ಆದ್ಯತೆ: ರಾಮಲಿಂಗಾ ರೆಡ್ಡಿ

KannadaprabhaNewsNetwork |  
Published : Jul 01, 2025, 01:48 AM IST
ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎ, ಬಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ಆಯಾ ದೇವಸ್ಥಾನಗಳಲ್ಲಿ ಅನುದಾನ ಲಭ್ಯವಿರುತ್ತದೆ. ಆದರೆ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಅನುದಾನ ಇಲ್ಲದೇ ಇರುವುದರಿಂದ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಯನ್ನು ಶ್ರೀಮಂತ ದೇವಸ್ಥಾನಗಳ ವತಿಯಿಂದ ನಡೆಸಲು ಆದ್ಯತೆ ನೀಡಲಾಗುವುದು ಎಂದರು.

ಮೂರು ವರ್ಷದವರೆಗೆ ಪ್ರಾಧಿಕಾರ ಇಲ್ಲ:

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಮಾಡಲಾಗುವುದು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ಆಗಬೇಕೆಂಬ ಬೇಡಿಕೆ ಇದೆ. ಈಗ ಸಮಿತಿ ಇರುವುದರಿಂದ ಮುಂದಿನ ಮೂರು ವರ್ಷದವರೆಗೆ ಪ್ರಾಧಿಕಾರ ಮಾಡುವುದಿಲ್ಲ, ಆ ಬಳಿಕ ಯೋಚನೆ ಮಾಡೋಣ ಎಂದರು.ಬಸ್ ಸಮಸ್ಯೆ ಪರಿಹಾರಕ್ಕೆ ಕ್ರಮ:ಈ ಹಿಂದೆ ನಾಲ್ಕು ವರ್ಷ ಬಿಎಂಟಿಸಿಗೆ ಮಾತ್ರ ಬಸ್ ಖರೀದಿಸಲಾಗಿತ್ತು. ಈಗ ಬಸ್ ಖರೀದಿಸಲಾಗುತ್ತಿದೆ. ಈ ವರ್ಷ ಸುಮಾರು ೮೦೦ ಬಸ್ ಕೆಎಸ್‌ಆರ್‌ಟಿಸಿಗೆ ಬರಲಿದೆ. ಇದರಲ್ಲಿ ದಕ್ಷಿಣ ಕನ್ನಡಕ್ಕೆ ಆದ್ಯತೆ ನೀಡಲಾಗುವುದು. ಚಾಲಕರ ನೇಮಕ ಮಾಡಲಾಗಿದ್ದು, ೩೪೦ ಚಾಲಕರನ್ನು ಪುತ್ತೂರಿಗೆ ನೀಡಲಾಗಿದೆ. ೨೦೦ ಚಾಲಕರನ್ನು ಮಂಗಳೂರಿಗೆ ನೀಡಲಾಗಿದೆ. ಬಳಿಕ ಚಾಮರಾಜನಗರ, ರಾಮನಗರ ವಿಭಾಗಕ್ಕೆ ನೀಡಲಾಗಿದೆ. ೨೦೦೦ ಚಾಲಕರಲ್ಲಿ ೧ ಸಾವಿರ ಚಾಲಕರನ್ನು ಈ ನಾಲ್ಕು ವಿಭಾಗಕ್ಕೆ ನೀಡಲಾಗಿದೆ ಎಂದರು. ಮಂಗಳೂರು ವಿಮಾನ ನಿಲ್ದಾಣದಿಂದ ಕುಕ್ಕೆಗೆ ಒಂದೆರಡು ತಿಂಗಳಲ್ಲಿ ಮೂರು ಬಸ್ ಗಳ ವ್ಯವಸ್ಥೆ ಮಾಡಲಾಗುವುದು. ಶಾಲಾ-ಕಾಲೇಜು ಮಕ್ಕಳಿಗೆ ಬಸ್ ನಿಲ್ಲಿಸದೇ ಇದ್ದಲ್ಲಿ ದೂರು ನೀಡಿ ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದರು.ಕೇಂದ್ರದ ಪ್ರಸಾದ ಯೋಜನೆಗೆ ರಾಜ್ಯದ ೫೪ ದೇವಸ್ಥಾನಗಳ ಪಟ್ಟಿ ಕಳುಹಿಲಾಗಿದೆ. ಪ್ರಸಾದ ಯೋಜನೆ ದೇಶಾದ್ಯಂತ ನಡೆಲಾಗುತ್ತಿದ್ದು, ಇದರಲ್ಲಿ ರಾಜ್ಯದ ನಾಲ್ಕು ದೇವಸ್ಥಾನಕ್ಕೆ ಅನುದಾನ ಬಂದಿದೆ. ಮೈಸೂರಿಗೆ ೩೦ ಕೋಟಿ, ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ೩೪ ಕೋಟಿ, ಇತರೆ ಎರಡು ದೇವಸ್ಥಾನಕ್ಕೆ ೧೫ ಲಕ್ಷ ಬಂದಿದೆ ಎಂದರು.

ಆರೋಗ್ಯ ಸೇವೆ ಭರವಸೆ:

ಕುಕ್ಕೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಇದೆ. ತಕ್ಷಣಕ್ಕೆ ನಮಗೆ ದೇವಸ್ಥಾನದ ಆಸು-ಪಾಸಿನಲ್ಲಿ ಜಾಗ ಕೊಟ್ಟಲ್ಲಿ ೨೪ ಗಂಟೆ ಆರೋಗ್ಯ ಸೇವೆ ನೀಡುವ ಕೇಂದ್ರ ಮಾಡುತ್ತೇವೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ ಎಂದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಆದಿ ಸುಬ್ರಹ್ಮಣ್ಯ ರಸ್ತೆಯ ತುಳಸಿತೋಟ ಎಂಬಲ್ಲಿ ದಾನಿಗಳಾದ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ವತಿಯಿಂದ ನಿರ್ಮಾಣವಾಗಲಿರುವ ಆಶ್ಲೇಷ ಬಲಿ ಪೂಜಾ ಮಂದಿರದ ನಿರ್ಮಾಣ ಕಾಮಗಾರಿಗೆ ದಾನಿಗಳಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಪತ್ರ ಹಸ್ತಾಂತರಿಸಿ ದಾನಿಗಳನ್ನು ಗೌರವಿಸಿದರು.

ಸಭೆ-ಪರಿಶೀಲನೆ:

ರಾಮಲಿಂಗ ರೆಡ್ಡಿ ಅವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮಾಸ್ಟರ್ ಪ್ಲಾನ್ ಸಭೆ ನಡೆಸಿದರು. ಸಭೆಯಲ್ಲಿ ೩ ಹಂತದ ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ದೇವಸ್ಥಾನದ ಸುತ್ತು ಪೌಳಿ, ಪಾರಂಪರಿಕ ಶೈಲಿಯ ರಥಬೀದಿ, ೫೦೦೦ ಮಂದಿಗೆ ಏಕ ಕಾಲದಲ್ಲಿ ಭೋಜನ ಪ್ರಸಾದ ವಿತರಿಸುವ ಕೊಠಡಿ, ವಸತಿ ಕಟ್ಟಡ, ಸಿಬ್ಬಂದಿ ವಸತಿ ಗೃಹ ಮತ್ತಿತರ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ಬಳಿಕ ಸಚಿವರು ಇಂಜಾಡಿ, ಆದಿ ಸುಬ್ರಹ್ಮಣ್ಯ, ಹೊಸ ಆಶ್ಲೇಷ ಮಂದಿರ ನಿರ್ಮಾಣವಾಗಲಿರುವ ಸ್ಥಳ, ಎಸ್‌ಎಸ್‌ಪಿಯು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

ಶಾಸಕಿ ಭಾಗೀರಥಿ ಮುರುಳ್ಯ, ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ ಮಲ್ಲಿಕಾ ಪಕ್ಕಳ, ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ವಿವಿಧ ಇಲಾಖೆ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ