ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork |  
Published : Nov 21, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಬಡವರ ಬದುಕನ್ನು ಕಟ್ಟಿಕೊಡುವ ಜತೆಗೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಶಾಸಕ ಎಚ್.ಡಿ.ತಮ್ಮಯ್ಯ। ಜಾಗರ ಹೋಬಳಿ ಮೇಲುಹುಲುವತ್ತಿ ಮಹಾತ್ಮ ಗಾಂಧಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಡವರ ಬದುಕನ್ನು ಕಟ್ಟಿಕೊಡುವ ಜತೆಗೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿ ಮೇಲುಹುಲುವತ್ತಿ ಮಹಾತ್ಮ ಗಾಂಧಿ ಗ್ರಾಪಂ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಜನರ ಮೂಲಭೂತ ಅಗತ್ಯ ಈಡೇರಿಸುವುದು ಸರ್ಕಾರದ ಪ್ರಮುಖ ಉದ್ದೇಶ. ಗ್ರಾಪಂ ಕಟ್ಟಡಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ಕೇಂದ್ರಗಳಾಗಬೇಕು ಎಂದರು.ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಿಸಲು ಶ್ರಮಿಸಿದ ಅಧ್ಯಕ್ಷ ಜಾನಕಿರಾಮ್ ಅವರ ಕಾರ್ಯ ಶ್ಲಾಘಿಸಿದ ಅವರು, ಅರಣ್ಯ ಇಲಾಖೆ ಮರಗಳು ಸೇರಿದಂತೆ ಹಲವು ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಲಾಯಿತು. ನರೇಗಾ ಯೋಜನೆಯಡಿ ಆರಂಭವಾದ ಕಾಮಗಾರಿ ದಾನಿಗಳ ಸಹಕಾರದಿಂದ ಪೂರ್ಣಗೊಂಡಿದೆ. ಕೆಲಚಂದ್ರ ಗ್ರೂಪ್ಸ್ ನಿಂದ ₹25 ಲಕ್ಷ ಹಾಗೂ ಆಯುಷ್ಠಾನ್ ಎಸ್ಟೇಟ್ ನಿಂದ ₹5 ಲಕ್ಷ ನೆರವು ದೊರೆತಿದೆ. ಶಾಸಕರ ನಿಧಿಯಿಂದ ₹10 ಲಕ್ಷ ನೀಡುವ ಭರವಸೆ ನೀಡಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ವರ್ಷಕ್ಕೆ ಸುಮಾರು ₹53 ಸಾವಿರ ಕೋಟಿ ಅನುದಾನ ಮೀಸಲಿಡುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆ ಯರಿಗೆ ಮಾಸಿಕ ₹2 ಸಾವಿರ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯೂ ಬಡ ಕುಟುಂಬಗಳಿಗೆ ನೆರವಾಗಿದೆ ಎಂದರು.ಜಾಗರ ಹೋಬಳಿ ಮೇಲುಹುಲುವತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ₹10 ಕೋಟಿಗೂ ಅಧಿಕ ಅನುದಾನ ನೀಡ ಲಾಗಿದೆ. ಪಂಚಾಯಿತಿ ಕಚೇರಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಮತ್ತು ಸೇತುವೆ ನಿರ್ಮಿಸಲಾಗಿದೆ. ಜಾಗರದಿಂದ ಮೇಲುಹುಲುವತ್ತಿವರೆಗೆ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಹುಲುವತ್ತಿ ಗ್ರಾಮದ ರಸ್ತೆ ಕಾಮಗಾರಿಗೆ ₹50 ಲಕ್ಷ ಅನುದಾನ ದಲ್ಲಿ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ನೆತ್ತಿಚೌಕದವರೆಗೆ ₹3 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು, ಮುಂದಿನ ಹಂತದಲ್ಲಿ ₹3.60 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಮಲೆನಾಡಿನ ಜನರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡೂ ಮುಖ್ಯ. ಕಸ್ತೂರಿರಂಗನ್ ವರದಿ ಜಾರಿಯಿಂದ ಜನರಿಗೆ ತೊಂದರೆಯಾಗುವ ಆತಂಕ ಎದುರಾದಾಗ ಸರ್ಕಾರದ ಗಮನಕ್ಕೆ ತರಲಾಗಿತ್ತು. ಈ ಕುರಿತು 3 ದಿನಗಳ ವಿಶೇಷ ಅಧಿ ವೇಶನ ನಡೆಸಿ ಜನರಿಗೆ ತೊಂದರೆಯಾಗದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಮಾನವ-ಪ್ರಾಣಿ ಸಂಘರ್ಷ ಮಲೆನಾಡಿನ ಪ್ರಮುಖ ಸಮಸ್ಯೆಯಾಗಿದೆ. ಹಾಸನ ಜಿಲ್ಲೆ ಬೇಲೂರು ಭಾಗದ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಹೊರಗಿನ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ತಂದು ಬಿಡಬಾರದು ಎಂಬ ನಿಲುವನ್ನು ಸರ್ಕಾರದ ಮುಂದೆ ವ್ಯಕ್ತಪಡಿಸಿದ್ದು, ರೈತರ ಬದುಕು ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದರು.ನೂತನ ಕಟ್ಟಡ ನಿರ್ಮಾಣ ಮೊದಲ ಹೆಜ್ಜೆಯಷ್ಟೇ. ಪಂಚಾಯಿತಿಗೆ ಬರುವ ಗ್ರಾಮಸ್ಥರ ಮನೆ ಖಾತೆ, ಚರಂಡಿ ಸ್ವಚ್ಛತೆ, ಬೀದಿದೀಪ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಅಧ್ಯಕ್ಷರು, ಪಿಡಿಒ ಹಾಗೂ ಕಾರ್ಯದರ್ಶಿಗಳು ತ್ವರಿತವಾಗಿ ಸ್ಪಂದಿಸಬೇಕು. ಜನರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಉತ್ತಮ ಸಾರ್ವಜನಿಕ ಸೇವೆ ದೊರೆತಾಗ ಮಾತ್ರ ಕಟ್ಟಡ ನಿರ್ಮಾಣ ಸಾರ್ಥಕವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಗ್ರಾಪಂ ಅಧ್ಯಕ್ಷ ಜಾನಕಿರಾಮ್, ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಗ್ರೂಪ್ಸ್ ಜನರಲ್ ಮ್ಯಾನೇಜರ್ ಸೋಮಶೇಖರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ