ದೊಡ್ಡಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ದೈನಂದಿನ ಕಚೇರಿ ಕಾರ್ಯಗಳ ಜೊತೆಗೆ ಚುನಾವಣಾ ಕಾರ್ಯಗಳಿಗೆ ಆದ್ಯತೆ ನೀಡಿ, ಕಟ್ಟುನಿಟ್ಟಾಗಿ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ .ಎನ್.ಶಿವಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಬಹುದು. ಆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಪೂರ್ವ ಸಿದ್ಧತೆಗಳನ್ನು ಇಂದಿನಿಂದಲೆ ಮಾಡಿಕೊಳ್ಳಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳ ನಿಯೋಜನೆ, ಎಲ್ಲಾ ಮತಗಟ್ಟೆಗಳಿಗೆ ಮೂಲ ಸೌಕರ್ಯಗಳ ವ್ಯವಸ್ಥೆ, ಭದ್ರತೆ, ಪೊಲೀಸ್ ಬಂದೋಬಸ್ತ್, ಚೆಕ್ ಪೋಸ್ಟ್ ನಿರ್ಮಾಣ, ಚುನಾವಣಾ ಲಿಪಿಕ ಪರಿಕರಗಳು ಹಾಗೂ ಇತರ ವಸ್ತುಗಳ ಖರೀದಿ, ಸಾರಿಗೆ ವ್ಯವಸ್ಥೆ, 24/7 ಕಂಟ್ರೋಲ್ ರೂಂ ತೆರೆಯಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರಿಗೆ ಒಂದು ಸುತ್ತಿನ ತರಬೇತಿ ಸೇರಿದಂತೆ ಇನ್ನಿತರ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
21 ನೋಡಲ್ ಅಧಿಕಾರಿಗಳ ನೇಮಕ:ಚುನಾವಣಾ ಕರ್ತವ್ಯಕ್ಕಾಗಿ 21 ವಿಷಯಗಳಿಗೆ 21 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಪ್ರಸ್ತುತದ ನಿರ್ದೇಶನಗಳನ್ವಯ ಕರಾರುವಕ್ಕಾಗಿ ಕಾರ್ಯನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಯ ಅಧಿಸೂಚನೆ ಪ್ರಕಟದ ದಿನಾಂಕದಿಂದ ಚುನಾವಣೆ ಫಲಿತಾಂಶದ ನಂತರವೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಅಧಿಕಾರಿಗಳು ಜಿಲ್ಲಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಬೇಕು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭಗಳು ನಡೆಯದಂತೆ ನೋಡಿಕೊಳ್ಳಬೇಕು. ಅನಿವಾರ್ಯ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿರಬೇಕು ಎಂದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟಿಸಲು ಸರಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳದಂತೆ ನಿಗಾವಹಿಸಬೇಕು. ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಸರ್ಕಾರದ ಅಧೀನದಲ್ಲಿರುವ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಪ್ರಚಾರ ಫಲಕಗಳಲ್ಲಿನ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಚುನಾವಣಾ ಸಭೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಕ್ಷಮದ ಅಧಿಕಾರಿಗಳ ಅನುಮತಿ ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಪ್ರಚಾರ ಕೈಗೊಳ್ಳಬೇಕು. ಚುನಾವಣೆ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಿ, ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
21ಕೆಡಿಬಿಪಿ2-