ನರೇಗಾದಲ್ಲಿ ಜಲಸಂರಕ್ಷಣೆಗೆ ಆದ್ಯತೆ: ಶರಣಪ್ಪ ಸಂಕನೂರು

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ಕೂಸಿನ ಮನೆಯ ಕೇರ್ ಟೇಕರ್ಸ್‌ಗಳಿಗೆ ಪ್ರಮಾಣಪತ್ರವನ್ನು ಹಾಗೂ 100 ದಿನ ಪೂರೈಸಿದ ಕುಟುಂಬಗಳಿಗೆ ಅಂಗಿ ಮತ್ತು ಕ್ಯಾಪ್‍ಗಳನ್ನು ಜಿಪಂ ಸಿಇಒ ನೀಡಿದರು.

ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗಿದ್ದು, ಜಲಸಂರಕ್ಷಣೆ, ಮೂಲ ಸೌಕರ್ಯ ಸ್ವತ್ತುಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಶ್ರೀಧರಗಡ್ಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಆಧರಿತ ಕಾಮಗಾರಿಗಳಾದ ಶಾಲೆ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಅಂಗನವಾಡಿ, ರಸ್ತೆ ಕಾಮಗಾರಿಗಳು ಮತ್ತು ಸಂಜೀವಿನಿ ಶೆಡ್ ಕಾಮಗಾರಿಗಳಿವೆ. ಅವುಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಎಲ್ಲ ಚುನಾಯಿತ ಪ್ರತಿಧಿಗಳು ಗ್ರಾಮಗಳ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹೊಸ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಸಸಿ ನೆಟ್ಟರು. ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕೂಲಿಕಾರರ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಇದೇ ವೇಳೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗ ಚೀಟಿಯನ್ನು ನೀಡಲಾಯಿತು. ಕೂಸಿನ ಮನೆಯ ಕೇರ್ ಟೇಕರ್ಸ್‌ಗಳಿಗೆ ಪ್ರಮಾಣಪತ್ರವನ್ನು ಹಾಗೂ 100 ದಿನ ಪೂರೈಸಿದ ಕುಟುಂಬಗಳಿಗೆ ಅಂಗಿ ಮತ್ತು ಕ್ಯಾಪ್‍ಗಳನ್ನು ಜಿಪಂ ಸಿಇಒ ನೀಡಿದರು. ವಿಶೇಷಚೇತನರಿಗೆ ಕ್ರೀಡೆಯನ್ನು ಏರ್ಪಡಿಸಿ ಮೊದಲ ಸ್ಥಾನ ಪಡೆದವರನ್ನು ಸನ್ಮಾನಿಸಲಾಯಿತು. ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಲ್ಲಾ ಐಇಸಿ ಸಂಯೋಜಕರು, ಪಿಡಿಒ, ತಾಲೂಕು ನರೇಗಾ ಸಿಬ್ಬಂದಿ, ಎಲ್ಲ ತಾಂತ್ರಿಕ ಸಹಾಯಕರು, ಬಿಫ್ಟಿಗಳು, ಗ್ರಾಮ ಕಾಯಕ ಮಿತ್ರರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

Share this article