ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಯುವಕರಿಗೆ ಆದ್ಯತೆ: ವಿವೇಕ್‌ ಬನ್ಸಾಲ್‌

KannadaprabhaNewsNetwork |  
Published : Aug 12, 2026, 02:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆರು ಮಂದಿ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಇವರ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಂಗ್ರಹವಾದ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು ಎಂದು ಪಕ್ಷದ ಜಿಲ್ಲಾ ವೀಕ್ಷಕ ವಿವೇಕ್‌ ಬನ್ಸಾಲ್‌ ಹೇಳಿದರು.

ಗದಗ: ಕಾಂಗ್ರೆಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಯಲ್ಲಿ ಶೇ. 50ರಷ್ಟು ಯುವಜನರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ವೀಕ್ಷಕ ವಿವೇಕ್‌ ಬನ್ಸಾಲ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷರಾಗುವವರು ಕನಿಷ್ಠ 5 ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿರಬೇಕು ಎಂಬ ನಿಯಮವಿದೆ. ಇದರೊಂದಿಗೆ ಯುವಜನರು, ಮಹಿಳೆಯರು ಹಾಗೂ ದಲಿತರ ಪ್ರಾತಿನಿಧ್ಯವನ್ನೂ ಪರಿಗಣಿಸಲಾಗುತ್ತದೆ ಎಂದರು. ಕಾಂಗ್ರೆಸ್‌ ಸಂಘಟನೆ ಮತ್ತು ಸಶಕ್ತೀಕರಣದ ಉದ್ದೇಶದಿಂದ ಸಂಘಟನಾ ಸೃಜನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆರು ಮಂದಿ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಇವರ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಂಗ್ರಹವಾದ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು. ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ನೀಟ್‌ ಪ್ರಶ್ನೆಪತ್ರಿಕೆಗಳ ಸೋರಿಕೆ ವಿರುದ್ಧ ಜೆನ್‌ ಝೀಗಳು ನಡೆಸಿದ ಹೋರಾಟದ ಬಗ್ಗೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಮೊದಲು ಧ್ವನಿ ಎತ್ತಿದರು. ಈ ಹೋರಾಟದ ಪರಿಣಾಮ ಕೇಂದ್ರ ಶಿಕ್ಷಣ‌ ಸಚಿವರು ರಾಜೀನಾಮೆ ನೀಡುವಂತಾಯಿತು. ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವೆಂದರೆ ಅದು ಭಾರತ, ರಾಹುಲ್ ಗಾಂಧಿ ಈ ಯುವ ಸಂಪತ್ತಿನ ಧ್ವನಿಯಾಗಿದ್ದಾರೆ ಎಂದರು.

ಕೇಂದ್ರ ಸರ್ಕಾರ ನೀಡಿದ್ದ ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಗಿದೆ. ಇದರಿಂದ ಯುವಜನತೆ ತತ್ತರಿಸಿದೆ. ದೇಶದ ವಿದೇಶಾಂಗ ಹಾಗೂ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ದೇಶ ಮುನ್ನಡೆಸಲಾಗದ ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಮಲ್ಲಿಕಾರ್ಜುನ ಅಕ್ಕಿ, ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್ಲ, ಕೆಪಿಸಿಸಿ ಕಾರ್ಯದರ್ಶಿ ಸತೀಶ ಮೆಹರವಾಡೆ, ಮುಖಂಡರಾದ ರಾಬರ್ಟ್ ದದ್ದಾಪುರಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಅಶೋಕ ಮಂದಾಲಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ 90 ದಿನಗಳ ಕಾಲ ನೀರು: ತಂಗಡಗಿ
ನಾಗೇಂದ್ರ ಯಾಕೆ ರಾಜೀನಾಮೆ ಕೊಡಬೇಕು: ತಂಗಡಗಿ