ಕೆಜಿಎಫ್‌ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork |  
Published : Jun 12, 2025, 03:24 AM IST
10ಕೆಜಿಎಫ್‌5 | Kannada Prabha

ಸಾರಾಂಶ

ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯಾದಂತೆ ನಗರ ಪ್ರದೇಶದ ವಿಸ್ತೀರ್ಣವೂ ಹೆಚ್ಚಾಗುವುದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಶೋಕ ನಗರಕ್ಕೆ ಹೋಗುವ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲಿಯೇ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಕೆಜಿಎಫ್ ರಸ್ತೆಯನ್ನು ಅಗಲೀಕರಣಕ್ಕೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಧ್ಯವಾದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ನಗರದ ಹೊರವಲಯದ ಪಾರಂಡಹಳ್ಳಿ ಬಳಿಯ ಅಂಗಾಳ ಪರಮೇಶ್ವರಿ ದೇವಾಲಯದ ಮುಂಭಾಗ ಜೋಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಅಂದಾಜು ೧೦ ಮೀಟರ್‌ಗಿಂತಲೂ ಅಗಲವಾದ ಡಬಲ್ ರಸ್ತೆ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಯನ್ನು ನಿರ್ಮಾಣ ಮಾಡಲಾಗುವುದು ಎಂದರು. ಸಂಪರ್ಕ ರಸ್ತೆಗಳ ಅಭಿವೃದ್ಧಿ

ಮುಂದಿನ ದಿನಗಳಲ್ಲಿ ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯಾದಂತೆ ನಗರ ಪ್ರದೇಶದ ವಿಸ್ತೀರ್ಣವೂ ಹೆಚ್ಚಾಗುವುದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಶೋಕ ನಗರಕ್ಕೆ ಹೋಗುವ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲಿಯೇ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಈಗಾಗಲೇ ಮೂರು ಬೃಹತ್ ಕಂಪನಿಗಳು ಕೆಜಿಎಫ್‌ನಲ್ಲಿ ಬಂಡವಾಳವನ್ನು ಹೂಡುವುದಕ್ಕೆ ಸರ್ಕಾರದೊಂದಿಗೆ ಎಂಒಯು ಮಾಡಿಕೊಂಡಿದ್ದು, ಸುಮಾರು ೫ ರಿಂದ ೮ ಸಾವಿರ ಮಂದಿಗೆ ಉದ್ಯೋಗಾವಕಾಶವನ್ನು ಒದಗಿಸುವ ಉದ್ದೇಶದಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನೇ ಸ್ಥಾಪಿಸಲು ಮುಂದಾಗಿವೆ ಎಂದರು

ಪಿಪಿಟಿ ಮಾದರಿಯಲ್ಲಿ ಇಂಟಿಗ್ರೆಟೆಡ್ ಟೌನ್‌ಶಿಪ್ ಅಭಿವೃದ್ಧಿಪಡಿಸುವುದಕ್ಕೆ ಈಗಾಗಲೇ ಬಜೆಟ್‌ನಲ್ಲಿ ಅನುಮೋದನೆಯಾಗಿದ್ದು, ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಸರ್ಕಾರ ಅನುಮೋದನೆ ನೀಡಿರುವುದಾಗಿ ತಿಳಿಸಿದರು.

ಕೈಗಾರಿಕಾ ಪಾರ್ಕ್‌ಗೆ 183 ಎಕರೆ

ದೂರದೃಷ್ಟಿಯನ್ನು ಇಟ್ಟುಕೊಂಡು ಮೊದಲ ಆದ್ಯತೆಯಾಗಿ ರಸ್ತೆಗಳ ಅಭಿವೃದ್ಧಿಗೆ ಅತಿ ಹೆಚ್ಚಿನ ಅನುದಾನವನ್ನು ವಿನಿಯೋಗಿಸುತ್ತಿರುವುದಾಗಿ ತಿಳಿಸಿದರು. ಸರ್ಕಾರ ಈಗಾಗಲೇ ೧೮೩ ಎಕರೆ ಪ್ರದೇಶದ ಜಾಗವನ್ನು ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಉಪಾಧ್ಯಕ್ಷ ಜರ್ಮನ್, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮತ್ತಿತರರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ