ಪಾರ್ಕ್, ಕೆರೆ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork |  
Published : Jan 20, 2026, 01:45 AM IST
ಪೊಟೊ: 20ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದ ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ಸೋಮವಾರ ಪಾರ್ಕ್ ನಿರ್ಮಾಣಕ್ಕೆ  ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ನಗರವನ್ನು ಸುಂದರಗೊಳಿಸುವುದು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯಲ್ಲಿ ಪಾರ್ಕ್‌ಗಳು ಮತ್ತು ಕೆರೆಗಳ ಅಭಿವೃದ್ಧಿ, ಅಪಾರ್ಟ್ಮೆಂಟ್‌ಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಶಿವಮೊಗ್ಗ: ನಗರವನ್ನು ಸುಂದರಗೊಳಿಸುವುದು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯಲ್ಲಿ ಪಾರ್ಕ್‌ಗಳು ಮತ್ತು ಕೆರೆಗಳ ಅಭಿವೃದ್ಧಿ, ಅಪಾರ್ಟ್ಮೆಂಟ್‌ಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.ನಗರದ ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ಸೋಮವಾರ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಹಾಗೂ ಶರಾವತಿ ಡೆಂಟಲ್ ಕಾಲೇಜು ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿ,

ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ನೂತನವಾಗಿ 25 ಲಕ್ಷ ರು. ಮೊತ್ತದಲ್ಲಿ ಪಾರ್ಕ್ ಅಭಿವೃದ್ಧಿ ಮತ್ತು 25 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಶರಾವತಿ ಡೆಂಟಲ್ ಕಾಲೇಜ್ ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಓಪನ್ ಜಿಮ್ ಉದ್ಘಾಟಿಸಲಾಗಿದ್ದು, ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇತ್ತೀಚೆಗೆ ಮಲೆನಾಡಿನ ಸೊಬಗು ಮರೆಯಾಗುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ನಗರದಲ್ಲಿ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ಧಿ ಪಡಿಸುವುದು ಅತ್ಯವಶ್ಯಕವಾಗಿದೆ. ಕಳೆದ ಬಾರಿ ವಾಜಪೇಯಿ ಬಡಾವಣೆಯಲ್ಲಿ 3 ಸಾವಿರ ಗಿಡಗಳನ್ನು ನೆಡಲಾಗಿತ್ತು. ಈ ಬಾರಿ ನಗರದಲ್ಲಿ 5 ಸಾವಿರ ಗಿಡಗಳನ್ನು ನೆಡುವ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ನಗರವನ್ನು ಹಸಿರಾಗಿಡಲು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 50 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿ, ಉದ್ಘಾಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ನಗರ ತನ್ನದೇ ಆದ ಇತಿಹಾಸ ಹೊಂದಿದ್ದು, ಎಲ್ಲ ಮೂಲಭೂತ ಸೌಕರ್ಯ ಇರುವುದರಿಂದ ಹೂಡಿಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ನಗರವನ್ನು ನಾವು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು. ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದು ಸಲಹೆ ನೀಡಿದರು.ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ 50 ಕೋಟಿ ರು. ವೆಚ್ಚದಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಲಾಗುವುದು. 12 ಕೆರೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಆಗಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.ನಗರದಲ್ಲಿ ಇತ್ತೀಚೆಗೆ ನಿವೇಶನಗಳು ಸಿಗುವುದು ಬಹಳ ಕಷ್ಟವಾಗಿರುವ ಕಾರಣ ನಗರ ವ್ಯಾಪ್ತಿಯಲ್ಲಿ ಸುಮಾರು 1000 ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಜನರಿಗೆ ನೀಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಾಗೂ ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುವ ಉದ್ದೇಶದಿಂದ ಗೋಪಿಶೆಟ್ಟಿಕೊಪ್ಪದಲ್ಲಿ 33 ಎಕರೆಯನ್ನು ರೈತರಿಂದ ಖರೀದಿಸಿ ನಿವೇಶನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಬಡಾವಣೆಗಳ ನಿವಾಸಿಗಳು ಕೋರಿರುವಂತೆ ಬಡಾವಣೆಗಳಲ್ಲಿನ ರಸ್ತೆ ಮರು ಡಾಂಬರೀಕರಣ, ಪಾರ್ಕ್ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಇತರೆ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು, ಪ್ರಸ್ತುತ ಇರುವ ಓಪನ್ ಜಿಮ್, ಪಾರ್ಕ್ ಇತರೆ ಸೌಲಭ್ಯಗಳನ್ನು ನಿವಾಸಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಟಿಪಿಎಂ ಅಭಿಲಾಷ್, ಸೂಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ಮಣಿ, ದೇವೇಂದ್ರಪ್ಪ, ಚಂದ್ರಶೇಖರ್, ಬಡಾವಣೆಗಳ ನಿವಾಸಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ