ಹಾನಗಲ್ಲ: ಬೀದಿ, ರಸ್ತೆ, ವೃತ್ತಗಳಿಗೆ ರೈತರು ಹಾಗೂ ಆದರ್ಶ ಶಿಕ್ಷಕರ ಹೆಸರನ್ನು ನಾಮಕರಣ ಮಾಡುವ ಮೂಲಕ ಇಡೀ ರೈತ ಸಮುದಾಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಗೌರವ ಸಲ್ಲಿಸುವ ಕಾರ್ಯ ನಮ್ಮಿಂದ ಮೊದಲ ಆದ್ಯತೆಯಾಗಿ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಭಾನುವಾರ ಪಟ್ಟಣದಲ್ಲಿ ಆದರ್ಶ ಶಿಕ್ಷಕ ಬಿ.ಬಿ. ಪದಕಿ ಹಾಗೂ ರೈತ ವೃತ್ತ ನಾಮಕರಣ ಅನಾವರಣಗೊಳಿಸಿದ ನಂತರ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರೈತರ ಬದುಕು ಹಸನಗೊಳಿಸುವ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಆ ಕಾರಣಕ್ಕಾಗಿಯೇ ಈಗ ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗ ಅತಿ ಶೀಘ್ರದಲ್ಲಿ ಕಾಮಗಾರಿ ಮುಗಿದು ಬಾಳಂಬೀಡ 110 ಕೆವಿ ವಿದ್ಯುತ್ ಗ್ರಿಡ್ ಉದ್ಘಾಟನೆಗೊಳ್ಳಲಿದೆ.
ಶಿಗ್ಗಾಂವಿ: ತಾಲೂಕಿನ ಸದಾಶಿವಪೇಟೆ ಗ್ರಾಮದಲ್ಲಿ ಶರಣ ಬಸವೇಶ್ವರರ ಪಂಚಲೋಹದ ನೂತನ ಮೂರ್ತಿ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸದಾಶಿವಪೇಟೆ ಶರಣ ಬಸವೇಶ್ವರ ದಾಸೋಹಮಠದ ಶಿವದೇವ ಶರಣ ಸ್ವಾಮೀಜಿ, ಮಹಾತ್ಮರು ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶರಣಬಸವೇಶ್ವರ ಸ್ವಾಮೀಜಿಯ ಆದರ್ಶ ಚಿಂತನೆ, ಲೋಕಕಲ್ಯಾಣದ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ ಎಂದರು.ಮೂರ್ತಿ ಮೆರವಣಿಗೆಯು ಮುವಳ್ಳಿ, ಸದಾಶಿವಪೇಟೆ ಸೇರಿದಂತೆ ಸುತ್ತಲಿನ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕುಂಭ ಹೊತ್ತ ಮಹಿಳೆಯರು, ಝಾಂಜ್ ಮೇಳ, ಡೊಳ್ಳು ಮೇಳ ಮೆರುಗು ತಂದಿತು. ಪ್ರತಿ ಓಣಿಗಳಲ್ಲಿ ಬಣ್ಣದ ರಂಗೋಲಿ ಹಾಕಲಾಗಿತ್ತು. ತೆಂಗು, ಬಾಳೆ ಹಾಗೂ ಮಾವಿನ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು, ಮಕ್ಕಳು ಆರತಿ ಮಾಡಿ, ಪೂಜೆ ಸಲ್ಲಿಸಿದರು.ಗದಿಗಯ್ಯ ಮಹಾಂತಿನಮಠ, ಶೇಕಯ್ಯಸ್ವಾಮಿ ನಂದಿಮಠ, ನಾರಾಯಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ವಡವಿ, ಗುರುಸಿದ್ದೇಶ್ವರ ಶರಣ ಅಕ್ಕನ ಬಳಗದವರು ಹಾಗೂ ಸದಾಶಿವಪೇಟೆ ಶರಣ ಬಸವೇಶ್ವರ ದಾಸೋಹಮಠದ ಸೇವಾ ಸಮಿತಿ ಸದಸ್ಯರು ಇದ್ದರು.