ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ತಾಕೀತು
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಯಾರ ವೈಯಕ್ತಿಕ ಪ್ರತಿಷ್ಠೆಗೂ ಮನ್ನಣೆ ನೀಡದೆ, ಸಂವಿಧಾನ ಶಿಲ್ಪಿಗೆ ಸಲ್ಲಿಸುವ ಗೌರವ ಹಾಗೂ ಪುತ್ಥಳಿಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲಾಡಳಿತ ಕಾನೂನು ನಿಯಮಗಳ ಮಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸೂಕ್ತ ಸ್ಥಳ ಗುರುತಿಸಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿದ್ದು, ಎಲ್ಲರೂ ಜಿಲ್ಲಾಡಳಿತದ ಅಂತಿಮ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಪಂ ವ್ಯಾಪ್ತಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತರಲ್ಲ. ಇಡೀ ವಿಶ್ವದ ಆಸ್ತಿಯಾಗಿದ್ದಾರೆ ನಾವುಗಳು ತಂದೆ-ತಾಯಿಗಳಿಗೆ ನೀಡುವ ಗೌರವಕ್ಕಿಂತ ಮೂರು ಪಟ್ಟು ಹೆಚ್ಚಿನ ಗೌರವವನ್ನು ಅಂಬೇಡ್ಕರ್ ಅವರಿಗೆ ಸಲ್ಲಿಸಬೇಕು. ಅವರು ನೀಡಿದ ಸಂವಿಧಾನದಿಂದಲೇ ನಾವೆಲ್ಲರೂ ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಆದ್ದರಿಂದ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸದೆ ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಹೋಗಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಸಾರ್ವಜನಿಕ ರಸ್ತೆ, ಚರಂಡಿ, ವಿದ್ಯುತ್ ಪರಿವರ್ತಕಗಳ ಸಮೀಪ ಅಥವಾ ವಿವಾದಿತ ಸ್ಥಳಗಳಲ್ಲಿ ಪುತ್ಥಳಿ ನಿರ್ಮಿಸಲು ಅವಕಾಶವಿಲ್ಲ. ಕಾನೂನು ಮಾರ್ಗಸೂಚಿಗಳ ಪ್ರಕಾರ ಪುತ್ಥಳಿಯ ಗೌರವ, ಸುರಕ್ಷತೆ ಮತ್ತು ಸಂರಕ್ಷಣೆಗೆ ಸೂಕ್ತವಾದ ಸ್ಥಳವನ್ನು ಗುರುತಿಸಲಾಗುವುದು ಎಂದರು.