ಮುಂಡರಗಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ: ಎಂ. ಗಂಗಪ್ಪ

KannadaprabhaNewsNetwork |  
Published : Mar 27, 2026, 02:15 AM IST
ಮುಂಡರಗಿ ಪುರಸಭೆಯ 2026-27ನೇ ಸಾಲಿನ ಆಯ-ವ್ಯಯವನ್ನು ಗುರುವಾರ ಆಡಳಿತಾಧಿಕಾರಿ ಹಾಗೂ ಗದಗ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಮಂಡಿಸಿದರು. | Kannada Prabha

ಸಾರಾಂಶ

ಪಟ್ಟಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಳವಡಿಸಿ ಹೆಚ್ಚು ಬಂಡವಾಳ ಆಸ್ತಿಗಳನ್ನು ಸೃಜಿಸುವುದೇ ಪುರಸಭೆ ಗುರಿಯಾಗಿದೆ.

ಮುಂಡರಗಿ: ಪುರಸಭೆಯ 2026- 27ನೇ ಸಾಲಿಗೆ ₹1,89,25,000 ಉಳಿತಾಯ ಬಜೆಟ್‌ನ್ನು ಪುರಸಭೆ ಆಡಳಿತಾಧಿಕಾರಿ ಮತ್ತು ಗದಗ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಮಂಡಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಅವರು, 2026- 27ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ತೆರಿಗೆ ಆದಾಯಗಳಿಂದ ₹2,80 ಕೋಟಿ, ತೆರಿಗೆಯೇತರ ಆದಾಯಗಳಿಂದ ₹2,96 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ, 15- 16ನೇ ಹಣಕಾಸು ಅನುದಾನ, ಎಸ್‌ಎಫ್‌ಸಿ ವಿಶೇಷ ಅನುದಾನ, ಕುಡಿಯುವ ನೀರು ಸಮಸ್ಯೆ ಪರಿಹಾರ ಅನುದಾನ ಇತರ ಸೇರಿ ಒಟ್ಟು ₹15,78 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಆಡಳಿತ ಮತ್ತು ಕಚೇರಿ ವೆಚ್ಚ ಹಾಗೂ ಇನ್ನಿತರ ಖರ್ಚು ಸೇರಿ ₹6,62 ಕೋಟಿ, ನೀರು ಸರಬುರಾಜು ನಿರ್ವಹಣೆಗೆ ₹1,32 ಕೋಟಿ, ಬೀದಿದೀಪ ನಿರ್ವಹಣೆಗೆ ₹3,10 ಕೋಟಿ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ₹1,64 ಕೋಟಿ, ಕಟ್ಟಡ ಕಾಮಗಾರಿ, ಯಂತ್ರೋಪಕರಣಗಳು, ರಸ್ತೆಗಳು, ಕಲ್ಲು ಹಾಸುಗಳು ಮತ್ತು ಪಾದಚಾರಿ ಮಾರ್ಗಗಳು, ಇನ್ನಿತರ ಪಟ್ಟಣದ ಅಭಿವೃದ್ಧಿ ಕೆಲಸಕ್ಕೆ ಒಟ್ಟು ₹36,12 ಕೋಟಿ ಅಂದಾಜಿಸಲಾಗಿದೆ ಎಂದು ವಿವರಿಸಿದರು.

ಪುರಸಭೆ ನಿಧಿಯಲ್ಲಿ ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮ, ಬಡಜನರ ಕಲ್ಯಾಣಕ್ಕಾಗಿ, ಅಂಗವಿಕಲರ ಕಲ್ಯಾಣಕ್ಕಾಗಿ, ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಲು ₹3,66 ಕೋಟಿ ಹಾಗೂ ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ₹17,57 ಲಕ್ಷ, ಇತರ ಬಡಜನರ ಕಲ್ಯಾಣಕ್ಕೆ, ಅಂಗವಿಕಲರ ಕಲ್ಯಾಣಕ್ಕೆ ₹8,92 ಲಕ್ಷ ಮೀಸಲಿರಿಸಲಾಗಿದೆ ಎಂದರು.

ಪಟ್ಟಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಳವಡಿಸಿ ಹೆಚ್ಚು ಬಂಡವಾಳ ಆಸ್ತಿಗಳನ್ನು ಸೃಜಿಸುವುದೇ ಪುರಸಭೆ ಗುರಿಯಾಗಿದೆ. ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಆಯವ್ಯಯದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.

ಕಟ್ಟಡ ಕಾಮಗಾರಿಗಳಿಗೆ ₹65,78 ಲಕ್ಷ, ಯಂತ್ರೋಪಕರಣಗಳಿಗಾಗಿ ₹27,59 ಲಕ್ಷ, ರಸ್ತೆಗಳು, ಕಲ್ಲು ಹಾಸುಗಳು, ಪಾದಚಾರಿ ಮಾರ್ಗಗಳು ಮತ್ತು ಇನ್ನಿತರ ಮೂಲ ಸೌಕರ್ಯಗಳಿಗಾಗಿ ₹3,82 ಕೋಟಿ, ಚರಂಡಿ ಮತ್ತು ಸ್ಲ್ಯಾಬ್ ಕಾಮಗಾರಿಗಳಿಗೆ ₹50,41 ಲಕ್ಷ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗಾಗಿ ₹19,67 ಲಕ್ಷ, ಉದ್ಯಾನಗಳಿಗಾಗಿ ₹82,29 ಲಕ್ಷ, ನಾಗರಿಕ ವಿನ್ಯಾಸಗಳಿಗಾಗಿ ₹36,29 ಲಕ್ಷ, ನೀರು ಸರಬರಾಜು ಹಾಗೂ ಇನ್ನಿತರ ಆಸ್ತಿ ಸೃಜನೆಗೆ ₹6,66 ಕೋಟಿ ಒಟ್ಟು ₹12,49 ಕೋಟಿ ಅಂದಾಜು ನಿರೀಕ್ಷಿಸಲಾಗಿದೆ ಎಂದರು.

ಮುಂಡರಗಿ ಪುರಸಭೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ಸ್‌, ಮಳಿಗೆ ಬಾಡಿಗೆ ವಸೂಲಾತಿಯನ್ನು 2025ರ ಫೆಬ್ರವರಿ ಅಂತ್ಯಕ್ಕೆ ಶೇ. 100ರಷ್ಟು ವಸೂಲಾತಿ ಮಾಡಿರುವುದು ಶ್ಲಾಘನೀಯ. ಇದು ಜಿಲ್ಲೆಯಲ್ಲಿಯೇ ಪ್ರಥಮ ಪುರಸಭೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಸ್ವಾಗತಿಸಿದರು. ವ್ಯವಸ್ಥಾಪಕ ರಮೇಶ ಗೊಂದಕರ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಳಿ ಸಂರಕ್ಷಣೆ, ಕೃಷಿ ಉತ್ತೇಜನಕ್ಕೆ ಬೀಜ ಬ್ಯಾಂಕ್ ಸ್ಥಾಪನೆ: ಕಾಜಾ ಶ್ವಾರ್ಮ
ಒಳಮೀಸಲಾತಿ ಜಾರಿ ಬಳಿಕವೇ ನೇಮಕಾತಿಗೆ ಆಗ್ರಹಿಸಿ ರಕ್ತದಲ್ಲಿ ಮನವಿ