ಹಾವೇರಿ: ಮಲ ಬಳಿಯುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್) ನಿಷೇಧ ಕಾಯ್ದೆ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯ, ಸಹಾಯಧನ- ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಚರ್ಮ ಕುಶಲಕರ್ಮಿಗಳಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಹಾಗೂ ವಿವಿಧ ಯೋಜನೆಗಳಡಿ ಸೌಲಭ್ಯ ತಲುಪಿಸಬೇಕು ಎಂದು ಲಿಡ್ಕರ್ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು-ಕೊರತೆಗಳ ನಿವಾರಣಾ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸುನೀಲ್ ಬೆಟಗೇರಿ, ಮಾರುತಿ ಹಂಜಗಿ, ಪೃಥ್ವಿರಾಜ ಬೆಟಗೇರಿ, ಎಚ್.ಡಿ. ಹೊನ್ನಕ್ಕಳವರ ಹಾಗೂ ಗುತ್ತೆಪ್ಪ ಹರಿಜನ ಅವರು ಅರ್ಹ ಚರ್ಮ ಕುಶಲಕರ್ಮಿಗಳನ್ನು ಗುರುತಿಸಬೇಕು ಹಾಗೂ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜಿಲ್ಲೆಯ ಹಾನಗಲ್ಲ ತಾಲೂಕು ಕೂಸನೂರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಆಡೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಶೇ. 24.10ರ ಅನುದಾನದಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಶೇ. 20ರಷ್ಟು ಮೀಸಲಿರಿಸಿದ ಅನುದಾನದಲ್ಲಿ ಭೌತಿಕ ಹಾಗೂ ಗುರಿ ಸಾಧಿಸಲಾಗಿದೆ. ಅದೇ ರೀತಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಪಿ.ಎಂ.ಎ.ವೈ. ಹಾಗೂ ಜಿ+1 ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮನೆ ಹಂಚಿಕೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಹಾಗೂ ಇನ್‌ಸ್ಯಾನಿಟರಿ ಲ್ಯಾಟ್ರಿನ್ಸ್ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಗೌರಮ್ಮ ನಾಗರಾಜ ಮಂತ್ರಿ, ಗೀತಾ ನಾರಾಯಣ ನೆಲ್ಲೂರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇದ್ದರು.
ಲಿಡ್ಕರ್ ಜಿಲ್ಲಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಡಿಸಿ: ಜಿಲ್ಲೆಯಲ್ಲಿರುವ ಚರ್ಮ ಕುಶಲಕರ್ಮಿಗಳ ಸಂಖ್ಯೆ ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿ ಪಡೆದ ಫಲಾನುಭವಿಗಳ ಮಾಹಿತಿ ನೀಡಲು ತಡಬಡಾಯಿಸಿದ ಲಿಡ್ಕರ್ ಜಿಲ್ಲಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಯಾವ ಫಲಾನುಭವಿಗೆ ಸೌಲಭ್ಯ ನೀಡಲಾಗಿದೆ ಎಂದು ಗೊತ್ತಿಲ್ಲ, ಜಿಲ್ಲೆಯ ಚರ್ಮ ಕುಶಲಕರ್ಮಿಗಳ ಸಂಖ್ಯೆ ಗೊತ್ತಿಲ್ಲ, ಏನು ಕೆಲಸ ಮಾಡ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಲಿಡ್ಕರ್ ಜಿಲ್ಲಾ ವ್ಯವಸ್ಥಾಪಕರ ಸಸ್ಪೆಂಡ್‌ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.