ಆರ್‌ಎಸ್‌ಎಸ್‌ನಿಂದ ದೇಸಿ ಹಸು ಹಾಲು ಮಾರಾಟ ಶುರು

KannadaprabhaNewsNetwork |  
Published : Mar 27, 2026, 02:00 AM IST
ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯ ಮಧುರಾ ಕಾಲನಿಯಲ್ಲಿ ಮನೆ ಮನೆಗೆ ಭಾರತೀಯ ಹಸುವಿನ ಹಾಲು ವಿತರಣಾ ಕೇಂದ್ರಕ್ಕೆ ಡಾ. ವಿ.ಎಸ್‌.ವಿ. ಪ್ರಸಾದ ಚಾಲನೆ ನೀಡಿದರು. | Kannada Prabha

ಸಾರಾಂಶ

ಪುರಾಣ ಕಾಲದಿಂದಲೂ ಋಷಿ-ಮುನಿಗಳು ಗೋವಿನ ಹಾಲನ್ನೇ ಬಳಸಿ ನೂರಾರು ವರ್ಷಗಳ ಕಾಲ ಸದೃಢ ಆರೋಗ್ಯ ಹೊಂದುತ್ತಿದ್ದರು. ಆದರೆ, ಇಂದು ಕಲಬೆರಕೆ, ಜರ್ಸಿ ಆಕಳು, ಪ್ಯಾಕೆಟ್‌ ಹಾಲು ಬಳಕೆ ಮಾಡುತ್ತಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ.

ಹುಬ್ಬಳ್ಳಿ:

ಆರ್‌ಎಸ್‌ಎಸ್‌ನ ಗೋ-ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತ ಹುಬ್ಬಳ್ಳಿ ಮಹಾನಗರ ಘಟಕದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ದೇಸಿ ಹಾಲು ಮಾರಾಟ ಕೇಂದ್ರ ಆರಂಭಿಸಿದ್ದು, ಗುರುವಾರ ಇಲ್ಲಿನ ಕೇಶ್ವಾಪುರದ ಮಧುರಾ ಕಾಲನಿಯಲ್ಲಿ ನೂತನ ಕೇಂದ್ರಕ್ಕೆ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪುರಾಣ ಕಾಲದಿಂದಲೂ ಋಷಿ-ಮುನಿಗಳು ಗೋವಿನ ಹಾಲನ್ನೇ ಬಳಸಿ ನೂರಾರು ವರ್ಷಗಳ ಕಾಲ ಸದೃಢ ಆರೋಗ್ಯ ಹೊಂದುತ್ತಿದ್ದರು. ಆದರೆ, ಇಂದು ಕಲಬೆರಕೆ, ಜರ್ಸಿ ಆಕಳು, ಪ್ಯಾಕೆಟ್‌ ಹಾಲು ಬಳಕೆ ಮಾಡುತ್ತಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ನೂರಾರು ವರ್ಷಗಳ ಕಾಲ ದೇಶವನ್ನು ಹಾಳು ಮಾಡಿದ ಬ್ರಿಟಿಷರು ದೇಸಿ ಹಸುಗಳ ಬದಲಾಗಿ ಜರ್ಸಿ ಆಕಳುಗಳನ್ನು ಕೊಡುಗೆಯಾಗಿ ನೀಡಿ ಹೋದರು. ಹೆಚ್ಚು ಹಾಲು ನೀಡುತ್ತವೆ ಎಂದು ರೈತರು ಇಂದು ದೇಸಿ ಹಸು ಸಾಕುವುದನ್ನು ಕೈಬಿಟ್ಟು ಜರ್ಸಿ ಆಕಳುಗಳ ಸಾಕಾಣಿಕೆಗೆ ಮುಂದಾಗಿರುವುದು ನೋವಿನ ಸಂಗತಿ. ಪ್ರತಿಯೊಬ್ಬರೂ ದೇಸಿ ಹಸುವಿನ ಹಾಲಿನ ಮಹತ್ವ ಅರಿಯುವಂತಾಗಬೇಕಿದೆ ಎಂದರು.

ಆರ್‌ಎಸ್‌ಎಸ್‌ನ ಗೋ-ಸೇವಾ ಗತಿವಿಧಿಯಡಿ ಮನೆ ಮನೆಗೂ ಭಾರತೀಯ ಹಸುವಿನ ಹಾಲು ಪೂರೈಕೆಗೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಮೊದಲ ಕೇಂದ್ರವಾಗಿ ಹುಬ್ಬಳ್ಳಿಯಲ್ಲಿ ಪ್ರಾರಂಭಿಸುತ್ತಿರುವುದು ಉತ್ತಮವಾದ ಕಾರ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಅಮ್ಮಿನಬಾಯಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಭಾರತದಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ. ನಮ್ಮ ಸಂಸ್ಕೃತಿ ಆರಂಭವಾಗುವುದೇ ಗೋಮಾತೆಯಿಂದ. ಹಾಗಾಗಿ ಪ್ರತಿಯೊಬ್ಬರೂ ದೇಸಿ ಗೋವುಗಳ ಸಂರಕ್ಷಣೆಗೆ ಪಣ ತೊಡಬೇಕಿದೆ. ಮನೆ ಮನೆಗೆ ಭಾರತೀಯ ಹಸುವಿನ ಹಾಲು ಮಾರಾಟ ಕೇಂದ್ರ ಪ್ರಾರಂಭಿಸಿರುವುದು ಶ್ಲಾಘನೀಯ. ಇದಕ್ಕಾಗಿ ಬೆಲೆ ನಿಗದಿಗೊಳಿಸಿರುವುದು ಗೋವುಗಳ ನಿರ್ವಹಣೆಗಾಗಿಯೇ ಹೊರತು ವ್ಯಾಪಾರದ ಉದ್ದೇಶವಲ್ಲ. ಪ್ರತಿಯೊಬ್ಬರೂ ದೇಸಿ ಗೋವಿನ ಪ್ರಯೋಜನಗಳ ಕುರಿತು ಅರಿವು ಹೊಂದುವ ಮೂಲಕ ಅವುಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದ ಸಂಚಾಲಕ ದತ್ತಾತ್ರೇಯ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಧುರಾ ಕಾಲನಿ ಅಧ್ಯಕ್ಷ ತೇಜಸ್‌ ಗೋಕಾಕ್, ಬಾಬುರಾವ್‌ ಘಂಟಸಾಲ, ಮುದಾರಾಂಜಿ ಚೌದರಿ, ಜಗದೀಶಭಾಯ್ ಸುತಾರ ಸೇರಿದಂತೆ ಹಲವರಿದ್ದರು. ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತದ ಟೋಳಿ ಸದಸ್ಯ ಭರತ್‌ ಜೈನ್‌ ಸ್ವಾಗತಿಸಿ, ನಿರೂಪಿಸಿದರು. ರಾಮ ಶರ್ಮಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ ಬಳಿಯುವ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ-ಜಿಲ್ಲಾಧಿಕಾರಿ
ಅಕ್ರಮ ಸಂಬಂಧವೇ ಮಾಜಿ ಶಾಸಕರ ಮಗನ ಕೊಲೆಗೆ ಕಾರಣ