ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಅಕ್ಟೋಬರ್ 23ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಮಂಗಳವಾರ ನಡೆದಿದ್ದು, ಎರಡು ಸ್ಥಾನಗಳಲ್ಲಿ ಎನ್‌ಡಿಎ (ಬಿಜೆಪಿ-ಜೆಡಿಎಸ್‌) ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇನ್ನೆರಡು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳಲ್ಲಿ ಮತಗಳ ಎಣಿಕೆ ಮುಂದುವರಿದಿದ್ದು, ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಶಶೀಲ್‌ಗೆ ಪಂಚ ಗೆಲುವಿನ ಹರ್ಷ:

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಶಶೀಲ್ ಜಿ.ನಮೋಶಿ ಅವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಜಯ ಗಳಿಸಿದ್ದಾರೆ. ನಮೋಶಿ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಅವರನ್ನು 3,297 ಮತಗಳ ಅಂತರದಿಂದ ಸೋಲಿಸಿದ್ದಾರೆ.


ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಐದು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಸೋಲು ಕಂಡಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಲ್ಲಿ ಎ.ಪಿ.ರಂಗನಾಥ್‌, ಪುಟ್ಟಣ್ಣ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳಿದ್ದರು.

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತಗಳ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಎಸ್‌.ವಿ.ಸಂಕನೂರ ಅವರು ಕಾಂಗ್ರೆಸ್‌ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗಿಂತ 5103 ಮತಗಳ ಮುನ್ನಡೆ ಸಾಧಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಕೆ.ಎಂ.ಸುರೇಶ್‌ ಅವರು ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ಅವರಿಗಿಂತ 1,863 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದ ಎಣಿಕೆ ಧಾರವಾಡದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಎಣಿಕೆ ಕಲಬುರಗಿಯಲ್ಲಿ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆ ಬೆಂಗಳೂರಲ್ಲಿ ನಡೆಯಿತು.

- ಶರಣಪ್ಪ ಮಟ್ಟೂರ (ಕಾಂಗ್ರೆಸ್‌ ) - 12,299

- ಗೆಲುವಿನ ಅಂತರ: 3,297

ಈಶಾನ್ಯ ಶಿಕ್ಷಕರ ಕ್ಷೇತ್ರ

- ಶಶೀಲ್‌ ಜಿ.ನಮೋಶಿ (ಬಿಜೆಪಿ) - 15,596

- ಶರಣಪ್ಪ ಮಟ್ಟೂರ (ಕಾಂಗ್ರೆಸ್‌ ) - 12,299

- ಗೆಲುವಿನ ಅಂತರ: 3,297

ಬೆಂಗಳೂರು ಶಿಕ್ಷಕರ ಕ್ಷೇತ್ರ:

- ಎ.ಪಿ.ರಂಗನಾಥ್‌ (ಎನ್‌ಡಿಎ) - 10,810 (ಗೆಲುವು).

- ಪುಟ್ಟಣ್ಣ (ಕಾಂಗ್ರೆಸ್‌) - 9,902 (ಸೋಲು).

- ಗೆಲುವಿನ ಅಂತರ: 908.

ಪಶ್ಚಿಮ ಪದವೀಧರ ಕ್ಷೇತ್ರ: (ಮೂರನೇ ಸುತ್ತು):

- ಎಸ್‌.ವಿ.ಸಂಕನೂರ (ಬಿಜೆಪಿ) - 18,811 (ಮುನ್ನಡೆ).

- ಮೋಹನ್ ಲಿಂಬಿಕಾಯಿ (ಕಾಂಗ್ರೆಸ್‌ ) - 13,886 (ಹಿನ್ನಡೆ).

- ಮುನ್ನಡೆ: 5,103.

ಆಗ್ನೇಯ ಪದವೀಧರ ಕ್ಷೇತ್ರ: (ಎರಡನೇ ಸುತ್ತು):

- ಕೆ.ಎಂ.ಸುರೇಶ್‌ (ಬಿಜೆಪಿ) - 6,712 (ಮುನ್ನಡೆ).

- ಶಶಿ ಹುಲಿಕುಂಟೆಮಠ (ಕಾಂಗ್ರೆಸ್‌) - 4,849 (ಹಿನ್ನಡೆ).

- ಮುನ್ನಡೆ 1,863.