ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರವು ಸದಾ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಬಿಜೆಪಿ-ಜೆಡಿಎಸ್‌ ಯಾವುದೇ ಮತಭೇದವಿಲ್ಲದೇ, ಒಟ್ಟಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪರಿಷತ್‌ನ ನಾಲ್ಕೂ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಶತಃಸಿದ್ಧ ಎಂದು ವಿಪ ಮಾಜಿ ಮುಖ್ಯ ಸಚೇತಕ, ಬಿಜೆಪಿ ಹಿರಿಯ ನಾಯಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಹೇಳಿದ್ದಾರೆ.

- ಕ್ಷೇತ್ರದಲ್ಲಿ 28 ಸಾವಿರವಿದ್ದ ಮತದಾರರೀಗ 1.80 ಲಕ್ಷಕ್ಕೂ ಅಧಿಕ: ಡಾ. ಎ.ಎಚ್.ಶಿವಯೋಗಿಸ್ವಾಮಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರವು ಸದಾ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಬಿಜೆಪಿ-ಜೆಡಿಎಸ್‌ ಯಾವುದೇ ಮತಭೇದವಿಲ್ಲದೇ, ಒಟ್ಟಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪರಿಷತ್‌ನ ನಾಲ್ಕೂ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಶತಃಸಿದ್ಧ ಎಂದು ವಿಪ ಮಾಜಿ ಮುಖ್ಯ ಸಚೇತಕ, ಬಿಜೆಪಿ ಹಿರಿಯ ನಾಯಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರ ನೇತೃತ್ವದಲ್ಲಿ ಪಕ್ಷವು ಅತ್ಯಂತ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಚುನಾವಣೆ ಎದುರಿಸುತ್ತಿದೆ. ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಕ್ಕೂ ಅವಕಾಶ ಇಲ್ಲದಂತೆ ಎಲ್ಲ ಜಿಲ್ಲೆಗಳ ನಾಯಕರು, ಕಾರ್ಯಕರ್ತರು ಒಟ್ಟಾಗಿ, ಒಗ್ಗಟ್ಟಿನಿಂದ ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ತಮಗೆ ಮೊದಲ ಸಲ ಬಿಜೆಪಿಯಿಂದ 1996ರಲ್ಲಿ ಅವಕಾಶ ಮಾಡಿಕೊಟ್ಟಿತ್ತು. 1996ರಿಂದ 2002, 2008ರಿಂದ 2014ರವರೆಗೆ ಎರಡು ಅವಧಿಗೆ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ತಮಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತ್ತು. ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾಗ 28 ಸಾವಿರ ಮತದಾರರು, ನಂತರ 30 ಸಾವಿರ ಮತದಾರರು, 45 ಸಾವಿರ ಇದ್ದ ಮತದಾರರ ಸಂಖ್ಯೆ 2014ರಲ್ಲಿ 80 ಸಾವಿರಕ್ಕೆ ತಲುಪಿತ್ತು. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 1.80 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

ರಾಜ್ಯ, ಜಿಲ್ಲಾ ನಾಯಕರ ನೇತೃತ್ವದ, ಹಿರಿಯರ ಮಾರ್ಗದರ್ಶನ, ಎಲ್ಲ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು, ಹಾಲಿ- ಮಾಜಿ ಸಂಸದರು ಒಟ್ಟಾಗಿ ಯಾವುದೇ ಮತಭೇದವಿಲ್ಲದೇ ಯೋಜನಾ ಬದ್ಧವಾಗಿ, ವ್ಯವಸ್ಥಿತವಾಗಿ, ಸಂಘಟಿತರಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ಒಬ್ಬರೂ ಶಾಸಕರಿಲ್ಲದ ಪರಿಸ್ಥಿತಿಯಲ್ಲೂ 1973ರಿಂದಲೂ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದೇವೆ. 1989ರಲ್ಲಿ ನಾವು ಇಲ್ಲಿಂದ ಗೆದ್ದಾಗ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಶಾಸಕರಾಗಿದ್ದರು ಎಂದು ಶಿವಯೋಗಿ ಸ್ವಾಮಿ ಅವರು ಮೆಲಕು ಹಾಕಿದರು.

ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈ ಸಲ ಪದವೀಧರರ ಚುನಾವಣೆಯಲ್ಲಿ ಯಾವುದೇ ವೈಮನಸ್ಸು, ಗೊಂದಲ ಇಲ್ಲದಂತೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹಿಂದೆ ಇದೇ ಕ್ಷೇತ್ರದಲ್ಲಿ ಗೆದ್ದ ಐವರು ಮಾಜಿ ಎಂಎಲ್‌ಸಿಗಳು ಒಂದೇ ತಂಡವಾಗಿ ಕೆಲಸ ಮಾಡುತ್ತಿರುವುದು ನಮ್ಮ ಅಭ್ಯರ್ಥಿಗೆ ಮತ್ತಷ್ಟು ಶಕ್ತಿ ತುಂಬಿದೆ. ಮುಂಬರುವ ಭವಿಷ್ಯದ ಕಾರಣಕ್ಕೆ, ಮುಂದಿನ ವಿಧಾನಸಭೆ ಚುನಾವಣೆಗೂ ವಿಪ ಫಲಿತಾಂಶ ದಿಕ್ಸೂಚಿ ಆಗುವಂತೆ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮೈತ್ರಿಶಕ್ತಿಗೆ ಮತ್ತಷ್ಟು ಶಕ್ತಿ ತುಂಬುವಂತೆ ಮತದಾರರೂ ಸೂಕ್ತವಾಗಿ ಸ್ಪಂದಿಸುತ್ತಿರುವುದು ನಮ್ಮೆಲ್ಲರ ಉತ್ಸಾಹ ನೂರ್ಮಡಿಗೊಳಿಸಿದೆ ಎಂದು ಡಾ.ಶಿವಯೋಗಿಸ್ವಾಮಿ ತಿಳಿಸಿದರು.

- - -

(ಫೋಟೋ: ಡಾ.ಶಿವಯೋಗಿ ಸ್ವಾಮಿ)