ರಾಜ್ಯದಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.ಅಂತಿಮ ಮತದಾರರ ಪಟ್ಟಿಯಲ್ಲಿ 2.25 ಕೋಟಿ ಪುರುಷರು, 2.29 ಕೋಟಿ ಮಹಿಳೆಯರು ಹಾಗೂ 2,841 ತೃತೀಯ ಲಿಂಗಿಗಳು ಸೇರಿ ಒಟ್ಟು 4.55 ಕೋಟಿ ಮತದಾರರಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

ಅಂತಿಮ ಮತದಾರರ ಪಟ್ಟಿಯಲ್ಲಿ 2.25 ಕೋಟಿ ಪುರುಷರು, 2.29 ಕೋಟಿ ಮಹಿಳೆಯರು ಹಾಗೂ 2,841 ತೃತೀಯ ಲಿಂಗಿಗಳು ಸೇರಿ ಒಟ್ಟು 4.55 ಕೋಟಿ ಮತದಾರರಿದ್ದಾರೆ. ಎಸ್‌ಐಆರ್‌ ಪೂರ್ವದಲ್ಲಿ ರಾಜ್ಯದ ಮತದಾರರ ಪಟ್ಟಿಯಲ್ಲಿ 5.54 ಕೋಟಿ ಮತದಾರರು ಇದ್ದರು. ಇದೀಗ ಅಂತಿಮ ಮತದಾರರ ಪಟ್ಟಿಯಲ್ಲಿ 4.55 ಕೋಟಿ ಮತದಾರರು ಇದ್ದಾರೆ. ಅಂದರೆ, ಬರೋಬ್ಬರಿ 99.32 ಲಕ್ಷ ಮತದಾರರ ಹೆಸರು ಡಿಲೀಟ್‌ ಆಗಿದೆ. ಇವರಲ್ಲಿ 16.40 ಲಕ್ಷ ಮಂದಿ ಮೃತಪಟ್ಟ ಮತದಾರರು ಆಗಿದ್ದಾರೆ.

ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರು ಸುದ್ದಿಗೋಷ್ಠಿ ನಡೆಸಿ ಅಂತಿಮ ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದರು.

ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ಕಳೆದ ಜೂ.30ರಿಂದ ರಾಜ್ಯದಲ್ಲಿ ಆರಂಭಗೊಂಡಿದ್ದ ಎಸ್‌ಐಆರ್‌ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಡೀ ಎಸ್‌ಐಆರ್‌ ಪ್ರಕ್ರಿಯೆಯನ್ನು ಕಾನೂನಿನಡಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಹೇಳಿದರು.

ಎಸ್‌ಐಆರ್‌ ಪೂರ್ವದಲ್ಲಿ ರಾಜ್ಯದಲ್ಲಿ 5.54 ಕೋಟಿ ಮತದಾರರು ಇದ್ದರು. ಎಸ್‌ಐಆರ್‌ ವೇಳೆ ಎಎಸ್‌ಡಿಡಿಒ ವರ್ಗದಡಿ 1.07 ಕೋಟಿ ಮತದಾರರ ಹೆಸರನ್ನು ಡಿಲೀಟ್‌ ಮಾಡಲಾಗಿತ್ತು. ಆ.24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ಮತದಾರರು ಇದ್ದರು. ಈ ಪೈಕಿ ನೋ ಮ್ಯಾಪಿಂಗ್‌ ಮತ್ತು ತಾರ್ಕಿಕ ವ್ಯತ್ಯಾಸದ ಕಾರಣಕ್ಕೆ 43.82 ಲಕ್ಷ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿದೆ. ಈ ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿದ್ದ ಕ್ಲೇಮು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗಿದೆ. ಅಂತಿಮ ಮತದಾರರ ಪಟ್ಟಿಗೆ ಒಟ್ಟು 10.08 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ಎಸ್‌ಐಆರ್‌ ಅವಧಿಯಲ್ಲಿ ಫಾರ್ಮ್‌ 6 ಸಲ್ಲಿಸಿ 8.77 ಲಕ್ಷ ಹೊಸ ಮತದಾರರು ಹಾಗೂ ಫಾರ್ಮ್‌ 6ಎ ಸಲ್ಲಿಸಿ 2,312 ಸಾಗರೋತ್ತರ ಮತದಾರರು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಸ್ಥಳಾಂತರಗೊಂಡಿದ್ದ 1.28 ಲಕ್ಷ ಮತದಾರರು ಫಾರ್ಮ್‌ 8 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಫಾರ್ಮ್‌ 7 ಸಲ್ಲಿಸಿದ್ದ 61,960 ಮತದಾರರು ಅನರ್ಹ:

ಅಂತೆಯೇ 2.29 ಲಕ್ಷ ಫಾರ್ಮ್‌ 7 ಸಲ್ಲಿಕೆಯಾಗಿದ್ದು, ಈ ಪೈಕಿ 1,091 ಮಂದಿ ಮೃತಪಟ್ಟವರು, 762 ಈಗಾಗಲೇ ಬೇರೆ ಕಡೆ ನೋಂದಣಿಯಾದವರು, ಬೇರೆ ಕಡೆಗೆ ಸ್ಥಳಾಂತರಗೊಂಡ 1.24 ಲಕ್ಷ ಹಾಗೂ ವಿಚಾರಣೆಗೆ ಗೈರಾದ ಕಾರಣಕ್ಕೆ 184 ಮಂದಿ ಸೇರಿ ಒಟ್ಟು 1.88 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಲಾಗಿದೆ. ನೋಟಿಸ್‌ ವಿಚಾರಣೆ ಹಂತದಲ್ಲಿ ಇಆರ್‌ಒ ಮತ್ತು ಎಇಆರ್‌ಒಗಳು 61,960 ಮತದಾರರನ್ನು ಅನರ್ಹರು ಎಂದು ಪರಿಗಣಿಸಿದ್ದಾರೆ. ಇನ್ನು ಗುಂಪು ಗುಂಪಾಗಿ ಫಾರ್ಮ್‌ 7 ಸಲ್ಲಿಕೆ ಸಂಬಂಧ ಒಂದೇ ಒಂದು ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಿಲ್ಲ. ಈ ಬಲ್ಕ್‌ ಫಾರ್ಮ್‌ 7 ಸಲ್ಲಿಕೆ ಸಂಬಂಧ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

1,873 ಮತಗಟ್ಟೆ ಹೆಚ್ಚಳ

ರಾಜ್ಯದಲ್ಲಿ ಎಸ್ಐಆರ್‌ ಪೂರ್ವದಲ್ಲಿ 21,520 ನಗರ ಮತಗಟ್ಟೆ ಹಾಗೂ 37,530 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 59,050 ಮತಗಟ್ಟೆಗಳಿದ್ದವು. ಎಸ್ಐಆರ್‌ ಬಳಿಕ 342 ನಗರ ಮತಗಟ್ಟೆ ಹಾಗೂ 1,531 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 1,873 ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಿದೆ. ಅಂದರೆ, ಒಟ್ಟು ಮತಗಟ್ಟೆಗಳ ಸಂಖ್ಯೆ 60,923ಕ್ಕೆ ಏರಿಕೆಯಾಗಿದೆ.

30-39 ವರ್ಷದೊಳಗೆ 1.02 ಕೋಟಿ ಮತದಾರರು

ಅಂತಿಮ ಮತದಾರರ ಪಟ್ಟಿಯ 4.55 ಕೋಟಿ ಮತದಾರರ ಪೈಕಿ 18-19 ವರ್ಷದೊಳಗಿನ 6.83 ಲಕ್ಷ ಮತದಾರರು, 20-29 ವರ್ಷದೊಳಗಿನ 86.56 ಲಕ್ಷ, 30-39 ವರ್ಷದೊಳಗಿನ 1.02 ಕೋಟಿ, 40-49 ವರ್ಷದೊಳಗಿನ 94.17 ಲಕ್ಷ, 50-59 ವರ್ಷದೊಳಗಿನ 76.15 ಲಕ್ಷ, 60-69 ವರ್ಷದೊಳಗಿನ 50.87 ಲಕ್ಷ, 70-79 ವರ್ಷದೊಳಗಿನ 27.45 ಲಕ್ಷ, 80-84 ವರ್ಷದೊಳಗಿನ 5.99 ಲಕ್ಷ ಹಾಗೂ 85 ವರ್ಷ ಮೇಲ್ಪಟ್ಟ 3.92 ಲಕ್ಷ ಮತದಾರರು ಇದ್ದಾರೆ.

3,252 ಎನ್‌ಆರ್‌ಐ ಮತದಾರರು

ಅಂತಿಮ ಮತದಾರರ ಪಟ್ಟಿಯಲ್ಲಿ 5.65 ಲಕ್ಷ ವಿಶೇಷ ಚೇತನ ಮತದಾರರು, 3,252 ಎನ್‌ಆರ್‌ಐ ಮತದಾರರು ಹಾಗೂ 44,322 ಮಂದಿ ಸರ್ವಿಸ್‌ ಮತದಾರರು ಇದ್ದಾರೆ.

ಎಸ್ಐಆರ್‌ ವೇಳೆ ಮೃತಪಟ್ಟ 14 ಅಧಿಕಾರಿಗಳಿಗೆ ಪರಿಹಾರ

ರಾಜ್ಯದಲ್ಲಿ ನಡೆದ ಎಸ್‌ಐಆರ್‌ ಸಂದರ್ಭದಲ್ಲಿ 14 ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ. ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಗಳಿಂದ ಆ ಮೃತ ಅಧಿಕಾರಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ, ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಹೇಳಿದರು.

ನಿಮ್ಮ ಹೆಸರಿದೆಯಾ?ನೋಡೋದು ಹೇಗೆ?

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಲಿರುವ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರು https//ceo.karnataka.gov.in ಅಥವಾ https//voters.eci.gov.in ವೀಕ್ಷಿಸಬಹುದು. ವೆಬ್‌ಸೈಟ್‌ ತೆರೆದು ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಮತಗಟ್ಟೆ ಸಂಖ್ಯೆ ನಮೂದಿಸಿದರೆ ಮತದಾರರ ಪಟ್ಟಿ ತೆರೆದುಕೊಳ್ಳಲಿದೆ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬಹುದು.

ಹೆಸರಿಲ್ವಾ? ಈಗಲೂ ಸೇರಿಸಲು ಅವಕಾಶ

ಎಸ್‌ಐಆರ್‌ ವೇಳೆ ಮತದಾರರ ಪಟ್ಟಿಗೆ ಸೇರ್ಪಡೆಯಾದ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ನಡೆಸಲಾಗುವುದು. ಅರ್ಹ ಮತದಾರರು ಫಾರ್ಮ್‌ 6 ಜತೆಗೆ ನಿಗದಿತ ದಾಖಲೆ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಫಾರ್ಮ್‌ 6 ಎಂಬುದು ನಿರಂತರ ಪ್ರಕ್ರಿಯೆ. ಅರ್ಹ ಮತದಾರರು ಆನ್‌ಲೈನ್‌ ಅಥವಾ ಸಂಬಂಧಿತ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಒ) ಸಂಪರ್ಕಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಎಂದು ವಿ.ಅನ್ಬುಕುಮಾರ್‌ ತಿಳಿಸಿದರು.

ಪಾಕ್‌ ಪ್ರಜೆ, 716 ವಿದೇಶಿಗರು ಪತ್ತೆ!

ಬೆಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆ ವೇಳೆ ಓರ್ವ ಪಾಕಿಸ್ತಾನಿ ಪ್ರಜೆ ಸೇರಿ ಒಟ್ಟು 716 ವಿದೇಶಿ ಪ್ರಜೆಗಳು ಪತ್ತೆ ಆಗಿದ್ದಾರೆ. ಅಚ್ಚರಿಯೆಂದರೆ, ಬಿಬಿಎಂಪಿ ಉತ್ತರ ಜಿಲ್ಲೆವೊಂದರಲ್ಲೇ 545 ನೇಪಾಳಿ ಪ್ರಜೆಗಳು, 24 ಅಮೆರಿಕ , 8 ಆಸ್ಟ್ರೇಲಿಯಾ, ಇಬ್ಬರು ಕೆನಡಾ, 3 ದುಬೈ, ಓರ್ವ ಕೆನಡಾ ಸೇರಿದಂತೆ ಒಟ್ಟು 583 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ. ಈ ಎಲ್ಲರ ಹೆಸರನ್ನೂ ಈಗ ಡಿಲೀಟ್‌ ಮಾಡಲಾಗಿದೆ.

ಬೆಂಗಳೂರಲ್ಲೀಗ ಬರೀ 59 ಲಕ್ಷ ಮತದಾರರು

ಬೆಂಗಳೂರು: ರಾಜಧಾನಿ ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಬಳಿಕ ಅಂತಿಮವಾಗಿ 59,08,151 ಮತದಾರರು ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಪೂರ್ವದಲ್ಲಿನ ಮತದಾರರ ಸಂಖ್ಯೆಗೆ ಹೋಲಿಸಿದರೆ ಒಟ್ಟು 46,88,744 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.