ಎಸ್ಐಆರ್ ಹೆಸರಿನಲ್ಲಿ ಆಗುತ್ತಿರುವ ಅಪ್ರಜಾತಾಂತ್ರಿಕ ನಡೆ ಖಂಡಿಸಿ ಎಐಡಿಎಸ್ಓ, ಎಸ್ಎಫ್ಐ, ಎಐಎಸ್ಎಫ್ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಎಸ್ಐಆರ್ ಹೆಸರಿನಲ್ಲಿ ಆಗುತ್ತಿರುವ ಅಪ್ರಜಾತಾಂತ್ರಿಕ ನಡೆ ಖಂಡಿಸಿ ಎಐಡಿಎಸ್ಓ, ಎಸ್ಎಫ್ಐ, ಎಐಎಸ್ಎಫ್ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆಗಳ ಜಿಲ್ಲಾ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುತ್ತಿರುವುದನ್ನು ವಿರೋಧಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ದೇಶದ ದೊಡ್ಡ ಸಂಖ್ಯೆಯ ಮತದಾರರ ಹಕ್ಕನ್ನೇ ಕಸಿಯುವ ಎಸ್ಐಆರ್ ಪ್ರಕ್ರಿಯೆಯು ಅಪ್ರಜಾತಾಂತ್ರಿಕವಷ್ಟೇ ಅಲ್ಲದೇ, ಬಡವರ ಬದುಕುವ ಹಕ್ಕನ್ನು ಕಸಿಯುವ ರಾಜಕೀಯ ಕುತಂತ್ರವಾಗಿದೆ. ಮುಖ್ಯ ಚುನಾವಣಾ ಆಯೋಗ ಯಾರ ಅನುಮತಿಯನ್ನೂ ಪಡೆಯದೆ ಏಕ ಪಕ್ಷಿಯ ನಿರ್ಧಾರ ಕೈಗೊಳ್ಳುತ್ತಾ ಬರುತ್ತಿದೆ ಎಂದರು.ಚುನಾವಣಾ ಆಯೋಗದ ಸದಸ್ಯರು 10 ತಿಂಗಳಲ್ಲಿ 14 ಬಾರಿ ಪ್ರಶ್ನೆ ಮಾಡಿದ್ದರೂ, ಅದರ ಬಗ್ಗೆ ಕಿಂಚಿತ್ತೂ ಕಿವಿಗೊಡದ ಮುಖ್ಯ ಚುನಾವಣಾ ಆಯುಕ್ತರು ತನ್ನ ಕಾರ್ಯ ಮುಂದುವರಿಸಿದ್ದಾರೆ, ಪರಿಣಾಮ ದೇಶದಲ್ಲಿ ಸುಮಾರು 13 ಕೋಟಿ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. 13 ಕೋಟಿ ಜನಸಂಖ್ಯೆಯಲ್ಲಿ ಬಹುಪಾಲು ಕೂಲಿ ಕಾರ್ಮಿಕರು, ರೈತಾಪಿ ಜನ, ದಾಖಲೆ ಹೊಂದದೇ ಹಿಂದುಳಿದವರು ಎಂದು ಅವರು ತಿಳಿಸಿದರು.
ಮತದಾರರನ್ನು ಪಟ್ಟಿಯಿಂದಲೇ ಹೊರಗಿಟ್ಟು, ಅಂತಹವರನ್ನು ಭಾರತೀಯರಲ್ಲವೆಂದು, ದೇಶದ್ರೋಹಿಗಳೆಂದು ಆಯೋಗ ಹೇಗೆ ಹೇಳಲು ಸಾಧ್ಯ? ಬಹುಭಾಗವು ತಮ್ಮ ಶ್ರಮದ ಮೇಲೆ ಬದುಕುವ ಜನರಿರುವ ನಮ್ಮ ದೇಶದಲ್ಲಿ ದಾಖಲೆ ಹುಡುಕುವುದಾದರೂ ಎಲ್ಲಿ?, ಮತದಾನದ ಹಕ್ಕು ಹೋರಾಟದ ಫಲವಾಗಿ ಬಂದಿದ್ದು, ಬದುಕುವ ಹಕ್ಕು ಇಲ್ಲದ ಸಂದರ್ಭದಲ್ಲಿ ಸಮಾಜ ಸುಧಾರಕರ ಹೋರಾಟದ ಫಲವಾಗಿ ದೊರೆತಿದ್ದು, ಅಂತಹ ಮತದಾನದ ಹಕ್ಕನ್ನೇ ಸಾಮಾನ್ಯ ಜನರಿಂದ ಕಿತ್ತುಕೊಳ್ಳಲಾಗುತ್ತಿದೆ. ಇದು ಖಂಡನೀಯ ಎಂದು ಅವರು ಆಕ್ಷೇಪಿಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮತದಾನದ ಹಕ್ಕನ್ನು ಕಾಯಬೇಕಿದ್ದ ಚುನಾವಣಾ ಆಯೋಗವೇ ಅರ್ಹ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಿರುವುದು ಘೋರ ಅನ್ಯಾಯ, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಘಟಿತರಾಗಿ ಬೃಹತ್ ಹೋರಾಟ ನಡೆಸಬೇಕಾದ ಸಮಯ ಬಂದಿದೆ. ದೇಶದ ಪ್ರಜೆಗಳಾಗಿಯೂ ಪ್ರಜೆಗಳಿಗೆಮತದಾನದ ಹಕ್ಕಿಲ್ಲವೆಂದರೆ ಸರ್ಕಾರದ ಇಂತಹ ಧೋರಣೆಯನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಎಸ್‌ಎಫ್ಐ ಜಿಲ್ಲಾ ಸಂಚಾಲಕ ಅನಂತರಾಜ ಮಾತನಾಡಿ, ಪ್ರಜಾತಾಂತ್ರಿಕವಾಗಿರಬೇಕಿದ್ದ ಮತದಾನದ ಹಕ್ಕನ್ನು ಚುನಾವಣಾ ಆಯೋಗ ನಮ್ಮಿಂದ ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ.ಈಗಾಗಲೇ ದೇಶ ಬಿಕ್ಕಟ್ಟಿನಲ್ಲಿದ್ದು, ನಿರುದ್ಯೋಗ ಸಮಸ್ಯೆ, ಹಲವಾರು ಪ್ರಶ್ನೆಪತ್ರಿಕೆ ಸೋರಿಕೆ ಮಧ್ಯೆಯೂ ದೊಡ್ಡ ಸಂಖ್ಯೆಯ ಮತದಾರರನ್ನು ಕಿತ್ತು ಹಾಕುವ ಹುನ್ನಾರ ನಡೆದಿದೆ. 2002ರಲ್ಲಿ ವಿದ್ಯಾಭ್ಯಾಸ ಮಾಡದ ಬಹುತೇಕ ದೇಶ ವಾಸಿಗಳಿಗೆ ಮೂಲ ದಾಖಲೆಗಳೇ ಇಲ್ಲ. ಬ್ಯಾಂಕ್ ಖಾತೆ, ಶಾಲೆ ಮುಖವನ್ನೂ ನೋಡದವರಿಗೆ 10ನೇ ತರಗತಿ ಅಂಕ ಪಟ್ಟಿ ಸಿಗಲು ಹೇಗೆ ಸಾಧ್ಯ?
ಇಂತಹ ಸಂದರ್ಭದಲ್ಲಿ ಎಲ್ಲಾ ಎಡ ವಿದ್ಯಾರ್ಥಿ ಸಂಘಟನೆಗಳು ಒಟ್ಟಾಗಿ ಅಪಪ್ರಜಾತಾಂತ್ರಿಕ ನೀತಿ ವಿರುದ್ಧ ಹೋರಾಡಬೇಕು ಎಂದರು.ಎಐಎಸ್ಎಫ್ ಜಿಲ್ಲಾಧ್ಯಕ್ಷ ಹಾಲೇಶ, ವಿವಿಧ ಸಂಘಟನೆಗಳ ಎಚ್.ಡಿ.ಗಂಗಾಧರ, ಪ್ರವೀಣ, ಸಂಜುನಾಯ್ಕ, ಪವನ, ಅಮೃತಾ, ಪಿ.ಜಿ.ಪ್ರಮೋದ, ಸ್ವಾಮಿ, ಸಂಜಯ, ಹಾಲೇಶ, ಶರತ್, ಮುಷರಫ್, ಭರತ್ ಇತರರು ಇದ್ದರು.