ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ದೇಶದಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿ ಇಂಡಿ ಒಕ್ಕೂಟ, ವಿವಿಧ ಪ್ರಗತಿಪರ, ರೈತ ಪರ, ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

- ಮತದಾರರ ಹಕ್ಕನ್ನು ಕಸಿಯಲು ಕಾಂಗ್ರೆಸ್, ಇಂಡಿ ಒಕ್ಕೂಟ ಬಿಡದು: ಇಬ್ರಾಹಿಂ ಖಲೀಲುಲ್ಲಾ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ದೇಶದಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿ ಇಂಡಿ ಒಕ್ಕೂಟ, ವಿವಿಧ ಪ್ರಗತಿಪರ, ರೈತ ಪರ, ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಇಂಡಿ ಒಕ್ಕೂಟ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಚೇತನ ಹೋಟೆಲ್ ರಸ್ತೆ, ಶಾಮನೂರು ರಸ್ತೆ ಮಾರ್ಗವಾಗಿ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ, ಅಲ್ಲಿಂದ ದಂತ ವೈದ್ಯಕೀಯ ಕಾಲೇಜು ಮಾರ್ಗವಾಗಿ ವಿದ್ಯಾನಗರದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪ್ರತಿಭಟನಾ ಸಭೆ ನಡೆಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಲಾಯಿತು.

ಇದೇ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಮಾತನಾಡಿ, ಎಸ್ಐಆರ್ ಹೆಸರಿನಲ್ಲಿ ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು, ಅಂತಹವರ ಮತದಾನದ ಹಕ್ಕನ್ನೇ ಕಸಿಯುವ ಕೆಲಸ ನಡೆಯುತ್ತಿದೆ. ದೇಶಾದ್ಯಂತ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಆದ್ದರಿಂದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳು, ಸಂಘಟನೆಗಳು, ಯುವಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ದೆಹಲಿ ಸೇರಿದಂತೆ ದೇಶಾದ್ಯಂತ ಇಂತಹ ಹೋರಾಟ ಹತ್ತಿಕ್ಕುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದ ಉಳಿವಿಗಾಗಿ, ಮತದಾರರ ಸಂವಿಧಾನ ಬದ್ಧ ಹಕ್ಕಿನ ರಕ್ಷಣೆಗಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳೆಯರು, ಯುವಜನರು, ಹಿರಿಯರು ಹೋರಾಟ ನಡೆಸಿದ್ದಾರೆ. ದೆಹಲಿಯ ಹೋರಾಟದ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ವಶಕ್ಕೆ ಪಡೆಯುವ ಮೂಲಕ ಹೋರಾಟವನ್ನೇ ತಡೆಯಲು ಅಲ್ಲಿನ ಸರ್ಕಾರಗಳು ಷಡ್ಯಂತ್ರ ಮಾಡಿದ್ದವು. ನಮ್ಮ ಹೋರಾಟವು ನಿರಂತರ ಎಂದು ಇಬ್ರಾಹಿಂ ಹೇಳಿದರು. ಸಿಪಿಐ ಜಿಲ್ಲಾ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ಈ ಹಿಂದೆ ಮನೆ ಮನೆಗೆ ತೆರಳಿ, ಮತದಾರರ ಪಟ್ಟಿ ಸರಿಪಡಿಸುವ ಸರಳ ವ್ಯವಸ್ಥೆ ಇತ್ತು. ಆದರೆ, ಈಗ ಅಧಿಕಾರದಲ್ಲಿ ಇರುವವರು ಜನರನ್ನೇ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಅಸ್ತ್ರವಾದ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಶಾಸನಬದ್ಧವಾಗಿ ಪ್ರತಿಭಟಿಸಬೇಕಾಗಿದೆ. ಈ ಹಿನ್ನೆಲೆ ದೇಶವ್ಯಾಪಿ ಹೋರಾಟಗಳು ನಡೆದಿದ್ದು, ದಾವಣಗೆರೆಯಲ್ಲೂ ನಾವೆಲ್ಲರೂ ಸೇರಿ ಬೃಹತ್ ಹೋರಾಟ ನಡೆಸಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ್, ಶ್ರೀನಿವಾಸ ನಂದಿಗಾವಿ, ಎಸ್.ಮಲ್ಲಿಕಾರ್ಜುನ, ದಾಕ್ಷಾಯಣಮ್ಮ, ಜಿ.ರಾಕೇಶ ಗಾಂಧಿ ನಗರ, ಡೋಲಿ ಚಂದ್ರು, ಸರ್ವ ಮಂಗಳ, ಎಚ್.ಜೆ.ಮೈನುದ್ದೀನ್, ಪಾಮೇನಹಳ್ಳಿ ನಾಗರಾಜ, ರೈತ ಮುಖಂಡರಾದ ಅರುಣಕುಮಾರ ಕುರುಡಿ, ಸಿಪಿಐಎಂನ ಶ್ರೀನಿವಾಸಮೂರ್ತಿ, ಸಿಪಿಐ ಆವರಗೆರೆ ಚಂದ್ರು, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ, ಆದಿಲ್ ಖಾನ್, ಡಿಎಸ್ಸೆಸ್ ಮುಖಂಡ ಹೆಗ್ಗರೆ ರಂಗಪ್ಪ, ಇಪ್ಟಾದ ಐರಣಿ ಚಂದ್ರು, ವಿಶ್ವನಾಥ್ ಸೇರಿದಂತೆ ರೈತರು ಇದ್ದರು.

- - -

(ಕೋಟ್‌)

ಮತದಾರರ ಹಕ್ಕುಗಳನ್ನು ಕಸಿಯುವ ಯಾವುದೇ ಪ್ರಯತ್ನ ಸಹಿಸುವುದಿಲ್ಲ. ಕೇಂದ್ರದ ನೀತಿಗಳಿಂದ ನಿರುದ್ಯೋಗ, ಬೆಲೆ ಏರಿಕೆ ಉಂಟಾಗಿದ್ದು, ಈಗ ಮತದಾರರ ಹಕ್ಕನ್ನೂ ಕಸಿಯುತ್ತಿರುವುದು ಅಸಹನೀಯ.

- ಹೊನ್ನೂರು ಮುನಿಯಪ್ಪ, ರಾಜ್ಯ ಉಪಾಧ್ಯಕ್ಷ, ರೈತ ಸಂಘ.

- - -

-9ಕೆಡಿವಿಜಿ8: ದಾವಣಗೆರೆಯಲ್ಲಿ ಶುಕ್ರವಾರ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಕಾಂಗ್ರೆಸ್, ಇಂಡಿ ಒಕ್ಕೂಟ, ಪ್ರಗತಿಪರ, ರೈತ, ದಲಿತ ಸಂಘಟನೆಗಳಿಂದ ಪ್ರತಿಭಟಿಸಲಾಯಿತು.