ನಿರ್ಗತಿಕ ಜನರ ಜೀವನಮಟ್ಟ ಸುಧಾರಣೆಗೆ ಆದ್ಯತೆ

KannadaprabhaNewsNetwork | Published : Feb 24, 2024 2:34 AM

ಸಾರಾಂಶ

ಬಡ ಕುಟುಂಬಗಳು ಹಾಗೂ ನಿರ್ಗತಿಕರು ಬಡತನದಿಂದ ಮುಕ್ತಗೊಳಿಸುವುದೇ ಮಾನವೀಯ ಧರ್ಮ. ಕಠಿಣ ಆರೋಗ್ಯ ಸಮಸ್ಯೆಗೆ ಒಳಗಾಗಿ, ಒಂಟಿಯಾಗಿರುವ ವಯೋವೃದ್ಧರ ಹಾಗೂ ಅಂಗವಿಕಲರ ಸಹಾಯಕ್ಕೆ ನಿಲ್ಲುವ ಕಾರ್ಯಕ್ರಮವೇ ವಾತ್ಸಲ್ಯ ಯೋಜನೆ ಉದ್ದೇಶ

ಬ್ಯಾಡಗಿ: ಅಸಹಾಯಕರು, ನಿರ್ಗತಿಕ ಜನರ ಜೀವನಮಟ್ಟ ಸುಧಾರಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆದ್ಯತೆಯಾಗಿದೆ ಎಂದು ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು.

ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ನಿವಾಸಿ ಗಂಗಮ್ಮ ಹಾವೇರಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ₹1 ಲಕ್ಷದ ಅನುದಾನದಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡ ಕುಟುಂಬಗಳು ಹಾಗೂ ನಿರ್ಗತಿಕರು ಬಡತನದಿಂದ ಮುಕ್ತಗೊಳಿಸುವುದೇ ಮಾನವೀಯ ಧರ್ಮ. ಕಠಿಣ ಆರೋಗ್ಯ ಸಮಸ್ಯೆಗೆ ಒಳಗಾಗಿ, ಒಂಟಿಯಾಗಿರುವ ವಯೋವೃದ್ಧರ ಹಾಗೂ ಅಂಗವಿಕಲರ ಸಹಾಯಕ್ಕೆ ನಿಲ್ಲುವ ಕಾರ್ಯಕ್ರಮವೇ ವಾತ್ಸಲ್ಯ ಯೋಜನೆ ಉದ್ದೇಶವಾಗಿದೆ. ಮಾತೃಶ್ರೀ ಹೇಮಾವತಿ ಅಮ್ಮನವರ ನೆಚ್ಚಿನ ಕಾರ್ಯಕ್ರಮ ಇದಾಗಿದೆ. ಅಶಕ್ತ, ಜನರು ವಯಸ್ಸಾದ ಕಾಲದಲ್ಲಿ ನೆಮ್ಮದಿ ಹಾಗೂ ಸಂತೋಷದಿಂದ ಬದುಕುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಕೊನೆಯ ಹಂತದವರೆಗೂ ಅವರಿಗೆ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಮಾತೋಶ್ರೀ ಅಮ್ಮನವರು ಅವಕಾಶ ಕೊಟ್ಟಿದ್ದಾರೆ. ಅದಕ್ಕಾಗಿಯೇ ಈ ವಾತ್ಸಲ್ಯ ಮನೆಯನ್ನು ರಚನೆ ಮಾಡಲಾಗಿದೆ. ಪ್ರತಿ ತಿಂಗಳು ಮಾಸಾಶನ, ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಿ ದುರ್ಬಲ ವರ್ಗದವರ ಜತೆಗೆ ನಾವಿದ್ದೇವೆ ಎನ್ನುವುದನ್ನು ಸಾಬೀತುಪಡಿಸುತ್ತೇವೆ ಎಂದರು.

ಜನಜಾಗೃತಿ ವೇದಿಕೆ ಸದಸ್ಯ ಶೇಖರಗೌಡ ಗೌಡ್ರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಣ್ಣ ಕೃಷಿಕರು, ದುರ್ಬಲ ವರ್ಗದ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮತ್ತು ಉಳಿತಾಯ ಸಂಘಟನೆಗಾಗಿ ಪ್ರೇರಣೆ ನೀಡಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಧಾರವಾಡ ಪ್ರಾದೇಶಿಕ ಜ್ಞಾನ ವಿಕಾಸ ಯೋಜನಾಧಿಕಾರಿ ಮಲ್ಲಿಕಾ, ತಾಲೂಕಿನ ಯೋಜನಾಧಿಕಾರಿ ಜಿ. ರಘುಪತಿ, ಒಕ್ಕೂಟದ ಅಧ್ಯಕ್ಷ ರತ್ನಾ, ವಲಯದ ಮೇಲ್ವಿಚಾರಕರಾದ ಉಮಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೀತಲ್, ಸೇವಾ ಪ್ರತಿನಿಧಿ ಶೋಭಾ ಇದ್ದರು.

Share this article