ಕರ್ತವ್ಯದ ಸ್ಥಳಗಳಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ:ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

KannadaprabhaNewsNetwork |  
Published : Feb 05, 2024, 01:47 AM IST
೩ಎಚ್‌ವಿಆರ್೩ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ನೌಕರ ಒತ್ತಡ ರಹಿತವಾಗಿ ಕೆಲಸ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು.

ವಿವಿಧ ಅಧಿಕಾರಿಗಳೊಂದಿಗೆ ಜಂಟಿ ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರಯವ ಅಧಿಕಾರಿ, ನೌಕರರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆ ಆಯೋಜಿಸಬೇಕು. ತುರ್ತಾಗಿ ಗಮನ ಸೆಳೆಯಬೇಕಾದ ನೌಕರರ ಸಮಸ್ಯೆಗಳ ಚರ್ಚೆಗೆ ಯಾವುದೇ ಸಂದರ್ಭದಲ್ಲಿ ಬಂದು ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ ಎಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಜಂಟಿ ಸಮಾಲೋಚನೆ ಸಭೆ ನಡೆಸಿದ ಅವರು, ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ ಸಲ್ಲಿಸಿದ ೧೬ ಅಂಶದ ವಿಷಯಗಳ ಕುರಿತಂತೆ ಚರ್ಚಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ನೌಕರ ಒತ್ತಡ ರಹಿತವಾಗಿ ಕೆಲಸ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಆಗಲು ಮೆಡಿಟೇಷನ್, ಆರೋಗ್ಯ ತಪಾಸಣೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನೌಕರರ ಸಂಘದಿಂದ ಆಯೋಜಿಸಿ ಕುಟುಂಬ ಸಹಿತ ಪಾಲ್ಗೊಳ್ಳುವ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಮಂತ್ರಿ ಜೀವ ವಿಮಾ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ ಈವರೆಗೂ ಯೋಜನೆಯನ್ನು ಅನುಷ್ಠಾನಗೊಳಿಸದೇ ಇರುವ ಇಲಾಖೆಗಳು ಕಡ್ಡಾಯವಾಗಿ ನೌಕರರು ಹಾಗೂ ಹೊರಗುತ್ತಿಗೆ ನೌಕರರಿಗೆ ವಿಮೆ ಮಾಡಿಸುವಂತೆ ಬಟವಾಡೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳಿಗೆ ವಸತಿ ಸಮಸ್ಯೆ ಕುರಿತಂತೆ ಚರ್ಚಿಸಿದ ಅವರು, ಲೋಕೋಪಯೋಗಿ ಇಲಾಖೆಯ ವಸತಿಗೃಹಗಳ ಸ್ಥಿತಿಗತಿ ಹಾಗೂ ದುರಸ್ತಿಯ ವಿವರ ಹಾಗೂ ಹೊಸ ವಸತಿ ಗೃಹ ನಿರ್ಮಾಣ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ನಿರ್ದೇಶನ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ, ಒತ್ತಡಗಳನ್ನು ಕಡಿಮೆಗೊಳಿಸುವಂತೆ ನೌಕರರ ಸಂಘದ ಬೇಡಿಕೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಇಂತಹ ಯಾವುದಾದರೂ ನಿರ್ದಿಷ್ಟ ಪ್ರಕರಣಗಳನ್ನು ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನೌಕರರಿಗೆ ಮೂಲ ಸೌಲಭ್ಯ:

ಜಿಲ್ಲಾ ಆಡಳಿತ ಭವನದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ ಅಧಿಕಾರಿ, ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಆರೋಗ್ಯ, ಶುಚಿತ್ವ, ಸಾರಿಗೆ ಸೌಕರ್ಯಗಳ ಗುಣಮಟ್ಟದ ಸುಧಾರಣೆಗೆ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಬೆಳಗ್ಗೆ ಹಾಗೂ ಸಂಜೆ ನೌಕರರ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಕ್ಷಣವೇ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಆರೋಗ್ಯ ತಪಾಸಣೆ:

ಜಿಲ್ಲಾಡಳಿತ ಭವನದಲ್ಲಿ ೫೬ ಇಲಾಖೆಗಳ ಎರಡು ಸಾವಿರಕ್ಕೂ ಅಧಿಕ ಅಧಿಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಸರ್ಕಾರಿ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಭವನದ ಸಂಕೀರ್ಣದಲ್ಲಿ ಡಿಜಿಟಲ್ ಲೈಬ್ರರಿ ಹಾಗೂ ಹಾಪ್‌ಕಾಮ್ಸ್ ಹಾಗೂ ಕೆಎಂಎಫ್ ಮಳಿಗೆ ಸ್ಥಾಪಿಸಲು ನಿರ್ದೇಶನ ನೀಡಿದರು.

ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ನೌಕರರು ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಣೆ, ನೌಕರರ ಸಂಘಕ್ಕೆ ನಿವೇಶನ ಮಂಜೂರು, ತಹಶೀಲ್ದಾರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಾಣ, ನೌಕರರ ಸಂಘಕ್ಕೆ ನಿವೇಶನ ಮಂಜೂರಾತಿ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ, ಉಪವಿಭಾಗಾಧಿಕಾರಿ ಚೆನ್ನಪ್ಪ, ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಮಮತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಕೊಪ್ಪದ, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎ. ಎಣ್ಣಿ, ರಾಜ್ಯ ಪರಿಷತ್ ಸದಸ್ಯ ಎಸ್.ಜಿ. ಸುಣಗಾರ, ಖಜಾಂಚಿ ಸಿದ್ದಣ್ಣ ಯಲಿಗಾರ, ಗೌರವಾಧ್ಯಕ್ಷ ಸಿ.ಜಿ. ಬ್ಯಾಡಗಿ, ಕಾರ್ಯಾಧ್ಯಕ್ಷ ವಾಚಪ್ಪ ಲಮಾಣಿ, ಸಿ.ಎನ್. ಲಕ್ಕನಗೌಡ್ರ, ಎಸ್.ಪಿ. ಗೌಡರ, ಎಂ.ಡಿ. ದ್ಯಾಮಣ್ಣನವರ, ಅರುಣ ಹುಡೇದಗೌಡ್ರ, ಎಂ.ಎಫ್. ಕರಿಯಣ್ಣನವರ, ಕೆ.ಎಫ್. ಚಿಕ್ಕೇರಿ ಇತರ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ