ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯಕ್ಕೆ ಆದ್ಯತೆ

KannadaprabhaNewsNetwork |  
Published : May 28, 2026, 02:00 AM IST
ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಹುಬ್ಬಳ್ಳಿ ರೈಲ್ವೆ ವಿಭಾಗದ ವತಿಯಿಂದ 40ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಅಮೃತ ಭಾರತ ಯೋಜನೆಯಡಿ ವಿಭಾಗದ ಹಲವು ರೈಲು ನಿಲ್ದಾಣಗಳನ್ನು ಸ್ಥಳೀಯತೆ, ಐತಿಹಾಸಿಕತೆ ಹಾಗೂ ಪ್ರವಾಸೋದ್ಯಮದ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ.

ಹುಬ್ಬಳ್ಳಿ:

ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯ ಒದಗಿಸುವುದು ಇಲಾಖೆಯ ಪ್ರಮುಖ ಧ್ಯೇಯವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಹೇಳಿದರು.

ಅವರು ಇಲ್ಲಿನ ರೈಲ್ವೆ ಕಾರ್ಯಾಗಾರದ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಹುಬ್ಬಳ್ಳಿ ರೈಲ್ವೆ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 40ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮೃತ ಭಾರತ ಯೋಜನೆಯಡಿ ವಿಭಾಗದ ಹಲವು ರೈಲು ನಿಲ್ದಾಣಗಳನ್ನು ಸ್ಥಳೀಯತೆ, ಐತಿಹಾಸಿಕತೆ ಹಾಗೂ ಪ್ರವಾಸೋದ್ಯಮದ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು..

ಅಳ್ನಾವರ, ಬಾದಾಮಿ, ಕೊಪ್ಪಳ ಹಾಗೂ ಹೊಸಪೇಟೆ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದೇ ರೀತಿ ಹಂತ ಹಂತವಾಗಿ ವಾಸ್ಕೋ-ಡ-ಗಾಮಾ ಹಾಗೂ ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಸುವ್ಯವಸ್ಥಿತ ಮತ್ತು ಆಧುನಿಕ ಮಟ್ಟದ ಉನ್ನತೀಕರಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಡಿಆರ್‌ಯುಸಿಸಿ ಕಾರ್ಯದರ್ಶಿ ಡಾ. ಕಾರ್ತಿಕ್ ಹೆಗಡೆಕಟ್ಟಿ ಮಾತನಾಡಿ, ರೈಲು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ರೈಲ್ವೆ ಪೊಲೀಸ್ (ಜಿಆರ್‌ಪಿ) ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಡಿಆರ್‌ಯುಸಿಸಿ ಸದಸ್ಯ ಚಂದ್ರಕಾಂತ ಗವಾಸ್ (ಗೋವಾ) ಮಾತನಾಡಿ, ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ಇಲಾಖೆ ಕಠಿಣ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.

ಇನ್ನೋರ್ವ ಸದಸ್ಯ ವಿ.ಜಿ. ಹಿರೇಗೌಡರ ಮಾತನಾಡಿ, ಗದಗ ಗೂಡ್ಸ್ ಶೆಡ್‌ನಲ್ಲಿ ದಾಸ್ತಾನುಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಯಗಳಿಗೆ ಅನುಕೂಲವಾಗುವಂತೆ ಮೇಲುಗಡೆ ತಗಡಿನ ಶೆಡ್ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ, ನೋಂದಾಯಿತ ಪ್ರಯಾಣಿಕರ ಸಂಘಗಳು, ಜನಪ್ರತಿನಿಧಿಗಳಿಂದ ನೇಮಕಗೊಂಡವರು, ವಾಣಿಜ್ಯೋದ್ಯಮಿಗಳು, ವ್ಯಾಪಾರಿ ಸಂಘಗಳು ಹಾಗೂ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಡಿಆರ್‌ಯುಸಿಸಿ ಸದಸ್ಯರಾದ ಕಿರಣ ದೀನನಾಥ ನಾಯ್ಕ, ಆರ್. ಗೋಪಾಲ ಕೃಷ್ಣ, ವಿ.ಜಿ. ಹಿರೇಗೌಡರ, ಡಿ.ಆರ್. ರಾಟಿ, ಚನ್ನವೀರ ಮುಂಗುರವಾಡಿ, ಗಿರಿಧರ ಸೊಂತ, ಕೆ.ಎಂ. ಕೊಟ್ರೇಶ, ಚಂದ್ರಕಾಂತ ಗವಾಸ್, ಅಗಸ್ಟೊ ಕೋಸ್ಟಾ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಟಿ.ವಿ. ಭೂಷಣ, ಪ್ರೇಮಚಂದ್ರ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಯಶಸ್ವಿಗೊಳಿಸಿ: ಡಾ. ದುರಗೇಶ್ ಕೆ.ಆರ್.
ಗೋ ಹತ್ಯೆ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ