ಹಾವೇರಿ: ಮನುಷ್ಯರನ್ನು ಮಾನಸಿಕವಾಗಿ ಸ್ವಾಸ್ಥ್ಯವಾಗಿಸುವ ಜೈಲುಗಳು ಅಧ್ಯಯನ ಶಿಬಿರಗಳು. ಇಂಥ ಶಿಬಿರದಲ್ಲಿ ಪಾಲ್ಗೊಂಡು ಮನಪರಿವರ್ತನೆಯಾಗಿ ಹೊರಬನ್ನಿ ಎಂದು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ಜೈಲಿನಲ್ಲಿರುವ ಕೈದಿಗಳ ಕುರಿತು ಅವರ ಹೆತ್ತವರು ಕೊರಗುತ್ತಾರೆ, ಮರುಗುತ್ತಾರೆ. ಕೋಪಕ್ಕೆ ಬುದ್ಧಿ ಕೊಟ್ಟ ಪರಿಣಾಮ ಜೈಲಿಗೆ ಬಂದಿರುವುದರಿಂದ ನಡತೆ ಶುದ್ಧೀಕರಿಸಿಕೊಳ್ಳಲು ಅವಕಾಶ ಆಗುತ್ತದೆ. ಹೀಗಾಗಿ ಜೈಲುಗಳೆಂದರೆ ಬಂದಿಖಾನೆಗಳಲ್ಲ. ಶುದ್ಧೀಕರಣ ಕೇಂದ್ರಗಳು ಎಂದರು.
ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ರಂಗ ಚಿಕಿತ್ಸೆ ಕುರಿತು ಮಾತನಾಡಿ, ರಂಗಭೂಮಿ, ಸಂಗೀತ, ಸಾಹಿತ್ಯದ ಸಂಗ ಮಾಡುವ ಮೂಲಕ ಬದಲಾಗಬೇಕು. ನಾಟಕಗಳನ್ನು ನೋಡಿ, ನಾಟಕದಲ್ಲಿ ಅಭಿನಯಿಸುವುದರಿಂದ ಬದುಕುವ ಬಗೆಯನ್ನು ಅರಿಯುತ್ತಿರಿ ಎಂದರು.ರಾಜ್ಯದ ಅನೇಕ ಜೈಲುಗಳಲ್ಲಿ ಯುವಕರೇ ಹೆಚ್ಚಿದ್ದಾರೆ. ದೇಶದ ಆಸ್ತಿಯಾದ ಯುವಕರು ಅಪರಾಧ ಚಟುವಟಿಕೆಗಳಿಂದ ದೂರವಾಗಬೇಕು. ಇದಕ್ಕೆ ಪೂರಕವಾಗಿ ಚಿಕಿತ್ಸೆಯಾಗುವ ಸಾಹಿತ್ಯ ಹಾಗೂ ರಂಗಭೂಮಿಯ ಸಂಸ್ಕಾರ ಪಡೆದು ಬದಲಾಗಬೇಕು ಎಂದರು.
ರಾಣಿಬೆನ್ನೂರು: ಬೀಜೋತ್ಪಾದನೆಯಿಂದ ಅಧಿಕ ಲಾಭವಿದ್ದು, ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್.ಎಂ. ತಿಳಿಸಿದರು.ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳಲ್ಲಿ ಬೀಜೋತ್ಪಾದನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂಬಳ ಜಾತಿಯಲ್ಲಿ ಗಂಡು ಮತ್ತು ಹೆಣ್ಣು ಹೂವುಗಳ ಜಾತಿ ಬೇರೆಯಾಗಿದ್ದು, ಒಂದೇ ಬಳ್ಳಿಯ ವಿವಿಧ ಸ್ಥಳದಲ್ಲಿ ಬಿಡುತ್ತವೆ. ಹೂವುಗಳು ಗಾತ್ರ ದೊಡ್ಡದಾಗಿರುವ ಕಾರಣ ಪರಕೀಯ ಪರಾಗಸ್ಪರ್ಶ ಮಾಡುವುದು ಸುಲಭ. ತರಕಾರಿ ಬೆಳೆಯಲ್ಲಿ ಬೀಜೋತ್ಪಾದನೆಗೆ ಬೇಸಾಯಕ್ಕೆ ಸೂಕ್ತ ಹವಾಗುಣ, ಕ್ಷೇತ್ರ ಆಯ್ಕೆ, ಸುರಕ್ಷಿತ ಬೇರ್ಪಡೆ, ಅಂತರ, ಭೂಮಿ ಸಿದ್ಧತೆ, ತಳಿಗಳ ಆಯ್ಕೆ, ಬೀಜೋಪಚಾರ, ಬಿತ್ತನೆ ವಿಧಾನ ಮುಂತಾದ ವಿಷಯಗಳ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಿದರು.ಹಿತ್ತಲ ಕೋಳಿ ಸಾಕಾಣಿಕೆ ಕುರಿತು ಪಶು ವಿಜ್ಞಾನಿ ಡಾ. ಮಹೇಶ ಕಡಗಿ ರೈತರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 25ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.