ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Jun 22, 2025, 11:47 PM IST
ಫೋಟೋ ಜೂ.೨೧ ವೈ.ಎಲ್.ಪಿ. ೦೫  | Kannada Prabha

ಸಾರಾಂಶ

ಊರಿನವರೆಲ್ಲರ ಆರೋಗ್ಯ ಕಾಪಾಡಲು ಪರಿಸರ ಸ್ವಚ್ಛವಾಗಿಡಲು ನಿತ್ಯ ಶುಚಿ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು.

ಯಲ್ಲಾಪುರ: ಊರಿನವರೆಲ್ಲರ ಆರೋಗ್ಯ ಕಾಪಾಡಲು ಪರಿಸರ ಸ್ವಚ್ಛವಾಗಿಡಲು ನಿತ್ಯ ಶುಚಿ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅಂತಹ ಕಾರ್ಮಿಕರಿಗೆ ಮನೆ ನೀಡುವುದು ಅತ್ಯಂತ ಸಂತಸ ತಂದಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಜೂ.೨೧ರಂದು ಪಟ್ಟಣದ ಮಚ್ಚಿಗಲ್ಲಿಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಿದ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಕೈಲಾದ ಸೇವೆ ಅವರ ಬದುಕಿಗೆ ಸಹಾಯವಾದಾಗ ನಾವು ಮಾಡಿದ ಕಾರ್ಯಕ್ಕೆ ಬೆಲೆ ದೊರೆಯುತ್ತದೆ. ಇಂತಹ ಕಾರ್ಮಿಕರಿಗೆ ಮಾಡಿದ ಸಹಾಯ ತಮ್ಮ ಜೀವಿತಾವಧಿವರೆಗೆ ಗೌರವ ಮತ್ತು ನೆಮ್ಮದಿ ನೀಡುವುದು. ಆಸರೆಯಾಗಲೆಂದು ವಸತಿ ಗೃಹಗಳನ್ನು ನೀಡಲಾಗಿದೆ. ನಿರ್ಮಿಸಿಕೊಟ್ಟ ಈ ಮನೆಗಳನ್ನು ಸ್ವಚ್ಛವಾಗಿಟ್ಟುಕೊಂಡು ನೆಮ್ಮದಿ ಜೀವನ ಸಾಗಿಸಬೇಕು. ಇಂದು ನಮ್ಮ ಆಂಜನೇಯನ ದಿನ. ಇಂತಹ ಪುಣ್ಯ ದಿನದಂದು ಈ ಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯ ಕೂಡ ಪುಣ್ಯತಮವಾದುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿ, ಪೌರ ಕಾರ್ಮಿಕರ ಬಹುವರ್ಷಗಳ ಕನಸು ನನಸಾಗಿದೆ. ಅವರ ಸೇವೆಗೆ ಸರ್ಕಾರ ಕೃತಜ್ಞತಾ ರೂಪದಲ್ಲಿ ವಸತಿಗೃಹಗಳ ನಿರ್ಮಾಣ ಮಾಡಿದೆ. ಗೌರವದ ಬದುಕಿಗೆ ಆಸರೆಯಾಗಿದೆ ಎಂದರು.

ಮಾಜಿ ಅಧ್ಯಕ್ಷೆ ಸುನಂದ ದಾಸ್, ಸದಸ್ಯರಾದ ಶ್ಯಾಮಲಿ ಪಾಟಣಕರ್, ರಾಧಾಕೃಷ್ಣ ನಾಯ್ಕ ಮಾತನಾಡಿದರು.

ಕಟ್ಟಡ ಕಾಮಗಾರಿ ಗುತ್ತಿಗೆದಾರರಾದ ನಿರಂಜನ ಪಾಟಣಕರ್, ಟಿ.ಪಿ ನಿಜಾಮುದ್ದೀನ್ ಅವರನ್ನು ಶಾಸಕ ಹೆಬ್ಬಾರ್ ಸನ್ಮಾನಿಸಿದರು.

ಸುಮಾರು ₹೧.೭೫ ಕೋಟಿ ಮೊತ್ತದಲ್ಲಿ ೧೨ ವಸತಿಗೃಹಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ೧೨ ಫಲಾನುಭವಿ ಪೌರ ಕಾರ್ಮಿಕರಿಗೆ ಶಾಸಕ ಹೆಬ್ಬಾರ್ ವಸತಿಗೃಹದ ಪ್ರಮಾಣಪತ್ರ ನೀಡಿದರು. ವಸತಿಗೃಹಗಳನ್ನು ತಾವೇ ಉಪಯೋಗಿಸಬೇಕೇ ವಿನಃ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ಮನೆ ವಾಪಸ್ ಪಡೆಯಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ವಿಜಯ್ ಮಿರಾಶಿ, ಪಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಲಿ ನೂತನನಗರ, ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಪಪಂ ಸದಸ್ಯರಾದ ಸತೀಶ್ ಶಿವಾನಂದ ನಾಯ್ಕ, ರಾಜು ನಾಯ್ಕ, ರವಿ ಪಾಟಣಕರ್, ನಾಗರಾಜ್ ಅಂಕೋಲೆಕರ್, ಮುಖ್ಯಾಧಿಕಾರಿ ಕುಮಾರ್ ನಾಯ್ಕ ಉಪಸ್ಥಿತರಿದ್ದರು.

ಪಪಂ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು, ಪೌರ ಕಾರ್ಮಿಕರ ಕುಟುಂಬದವರು ಉಪಸ್ಥಿತರಿದ್ದರು. ಪಪಂ ಸಿಬ್ಬಂದಿ ಹೇಮಾವತಿ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ