ಸೋಮರಡ್ಡಿ ಅಳವಂಡಿ ಕೊಪ್ಪಳ
ವಿಜಯನಗರ ಅರಸರ ಸಾಮಂತ ದೊರೆ ನಾಡಪ್ರಭು ಕೆಂಪೇಗೌಡ ಬಂಧಿಯಾಗಿದ್ದ ಜಿಂಜರ ಬೆಟ್ಟದಲ್ಲಿನ ಸೆರೆಮನೆಯ ಮೇಲೆ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಬೆಳಕು ಚೆಲ್ಲಿದ್ದಾರೆ. ಈ ಮೂಲಕ ಕೆಂಪೇಗೌಡ ಆನೆಗೊಂದಿ ಬಳಿ ಸೆರೆಮನೆಯಲ್ಲಿದ್ದರು ಎನ್ನುವ ಬಹುವರ್ಷಗಳ ಅನುಮಾನಕ್ಕೆ ತೆರೆ ಎಳೆದಿದ್ದಾರೆ.ಡಾ. ಕೋಲ್ಕಾರ ಈ ಕುರಿತು ಸಂಶೋಧಿಸಿದ್ದು, ಕೃಷ್ಣದೇವರಾಯನ ಸಮಾಧಿ ಮತ್ತು ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಕಿರುಪುಸ್ತಕ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ.
ಈ ಕಿರುಪುಸ್ತಕ ಕೃಷ್ಣದೇವರಾಯನ ಸಮಾಧಿ ಮತ್ತು ಕೆಂಪೇಗೌಡ ಬಂಧನದ ವೇಳೆಯಲ್ಲಿ ಇದ್ದ ಸೆರೆಮನೆಯ ಕುರಿತು ದಾಖಲೆ ಸಮೇತ ವಿವರಣೆ ನೀಡಲಾಗಿದೆ.ಬೆಂಗಳೂರು ನಗರದ ನಿರ್ಮಾತೃ ಎಂದೇ ಖ್ಯಾತಿಯಾಗಿರುವ ನಾಡಪ್ರಭು ಕೆಂಪೇಗೌಡ ಯಲಹಂಕಾದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ಆಳ್ವಿಕೆ ನಡೆಸುತ್ತಿದ್ದರು. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಇವರು ಬಹಳ ಪ್ರಸಿದ್ಧಿಯಾಗಿದ್ದರು. ಇವರ ಆಳ್ವಿಕೆ ಮೆಚ್ಚಿ ಶ್ರೀಕೃಷ್ಣದೇವರಾಯ 300 ವರಹ ನೀಡಿದ್ದು ಅಲ್ಲದೆ ಮತ್ತಷ್ಟು ಪ್ರದೇಶಗಳನ್ನು ಅವರಿಗೆ ನೀಡಿದ್ದರು.
ಆದರೆ, ಶ್ರೀಕೃಷ್ಣದೇವರಾಯನ ನಿಧನದ ನಂತರ ಅಧಿಕಾರಕ್ಕೆ ಬಂದ ರಾಮರಾಯ ಮತ್ತು ಕೆಂಪೇಗೌಡ ನಡುವೆ ಸಂಬಂಧ ಅಷ್ಟಾಗಿ ಚೆನ್ನಾಗಿ ಇರಲಿಲ್ಲ. ಕೆಂಪೇಗೌಡ ಕ್ರಮೇಣ ಸ್ವತಂತ್ರ ರಾಜನಂತೆ ಆಳ್ವಿಕೆ ನಡೆಸಲಾರಂಭಿಸಿದರು. ಸ್ವಂತ ನಾಣ್ಯಗಳ ಚಲಾವಣೆಗೆ ತಂದರು. ಚನ್ನಪಟ್ಟಣದ ಜಗದೇವರಾಯ ಈ ಕುರಿತು ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಅಳಿಯ ರಾಮರಾಯನಿಗೆ ಮಾಹಿತಿ ತಲುಪಿಸಿದ್ದು, ಅಲ್ಲದೆ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮತ್ವ ಧಿಕ್ಕರಿಸಿದ್ದಾನೆ ಎಂದು ದೂರು ಸಲ್ಲಿಸಿದ್ದನು. ಪರಿಣಾಮ ಕೆರಳಿದ ಅಳಿಯ ರಾಮರಾಯ ಕೆಂಪೇಗೌಡ ಅವರನ್ನು ಉಪಾಯದಿಂದ ವಿಜಯನಗರ ಸಾಮ್ರಾಜ್ಯಕ್ಕೆ ಕರೆಯಿಸಿ ಬಂಧಿಸಿದರು. 1560ರಿಂದ 1565ರ ವರೆಗೆ (ಐದು ವರ್ಷ) ಜೈಲಿನಲ್ಲಿಟ್ಟು ಬಿಡುಗಡೆ ಮಾಡಲಾಯಿತು.ಲೂಯಿರೈಸ್ 1897ರಲ್ಲಿ ಬರೆದ ಮೈಸೂರು ಗೆಜೆಟೆರಿಯನ್ನಲ್ಲಿಯೂ ಇದನ್ನು ಉಲ್ಲೇಖಿಸಿದ್ದಾರೆ. ಅವರು ಸಹ ಕೆಂಪೇಗೌಡ ಅವರನ್ನು ವಿಜಯನಗರ ಸಾಮ್ರಾಜ್ಯದ ದೊರೆ ಅಳಿಯ ರಾಮರಾಯ ಬಂಧಿಸಿದ್ದರು ಎಂದಷ್ಟೇ ಹೇಳಿದ್ದರು. ಆದರೆ, ಎಲ್ಲಿ ಬಂಧಿಸಿದ್ದರು ಎನ್ನುವುದನ್ನು ಹೇಳಿರಲಿಲ್ಲ.
ಅಲ್ಲಗಳೆದಿದ್ದರು: ಇತ್ತೀಚೆಗೆ ನಾಡಪ್ರಭು ಕೆಂಪೇಗೌಡ ಅವರ ಸಮಗ್ರ ಆಳ್ವಿಕೆ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಕೆಲವು ಸಂಶೋಧಕರು ಕೆಂಪೇಗೌಡ ಅವರನ್ನು ಬಂಧಿಸಿದ್ದನ್ನು ಅಲ್ಲಗಳೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ದೊರೆ ಅಳಿಯ ರಾಮರಾಯ ಕೆಂಪೇಗೌಡ ಅವರನ್ನು ಬಂಧಿಸಿದ್ದರು ಎನ್ನುವುದನ್ನು ಇತಿಹಾಸದಿಂದ ಕೈಬಿಟ್ಟಿದ್ದರು.ಬಂಧಿಸಿದ್ದ ಸೆರೆಮನೆ:ಈ ಕುರಿತು ಸಮಗ್ರ ಸಂಶೋಧನೆ ನಡೆಸಿರುವ ಖ್ಯಾತ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಶ್ರೀ ಕೃಷ್ಣದೇವರಾಯರ ಸಮಾಧಿ ಮತ್ತು ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಎನ್ನುವ ಸಂಶೋಧನಾ ಕಿರುಪುಸ್ತಕವನ್ನೇ ಹೊರ ತಂದಿದ್ದಾರೆ. ಅದರಲ್ಲಿ ಶ್ರೀಕೃಷ್ಣ ದೇವರಾಯನ ಸಮಾಧಿ ಆನೆಗೊಂದಿ ಬಳಿ ಇರುವುದೇ ನಿಜ ಹಾಗೂ ಆನೆಗೊಂದಿ ಬಳಿಯ ಜಿಂಜರ ಬೆಟ್ಟದಲ್ಲಿರುವ ಕೆಂಪೇಗೌಡ ಅವರು ಬಂಧಿಸಲ್ಪಟ್ಟ ಸೆರೆಮನೆಯ ಕುರಿತು ಮಾಹಿತಿ ನೀಡಿದ್ದಾರೆ.
ಆನೆಗೊಂದಿ ಗ್ರಾಮದ ಉತ್ತರ ಬದಿಯಲ್ಲಿ ಸ್ಥಳೀಯರು ತೋರಿಸುವ ಜಿಂಜರ ಬೆಟ್ಟದಲ್ಲಿ ನಾಲ್ಕುನೂರು ಮೀಟರ್ ಎತ್ತರದಲ್ಲಿದೆ. ಏಕಶಿಲಾಬೆಟ್ಟದ ಮೇಲೆ ವಿಶ್ವಕರ್ಮರ ಮೂಲ ಸರಸ್ವತಿ ಮಠವಿದೆ. ಮುಂದೆ ಸಾಗಿ, ಮೆಟ್ಟಿಲುಗಳನ್ನು ಏರಿದರೆ ಅಲ್ಲೊಂದು ಸೆರೆಮನೆಯಿದೆ. ಇದರಲ್ಲಿಯೇ ಕೆಂಪೇಗೌಡ ಅವರನ್ನು ಬಂಧಿಸಿದ್ದರು ಎನ್ನುವುದನ್ನು ಡಾ. ಶರಣಬಸಪ್ಪ ಕೋಲ್ಕಾರ ಅವರು ತಮ್ಮ ಪುಸ್ತಕದಲ್ಲಿ ಬಲವಾಗಿ ಸಮರ್ಥಿಸಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿಯೂ ಹೇಳಿಕೊಂಡಿದ್ದಾರೆ.ಈ ಸಂಶೋಧನಾ ಲೇಖನ ನಾನು ಹಂಪಿ ವಿಶ್ವವಿದ್ಯಾಲಯದ ವಿಚಾರ ಸಂಕಿರಣದಲ್ಲಿಯೂ ಪ್ರಸ್ತಾಪಿಸಿದಾಗ ಅಲ್ಲಿದ್ದ ವಿದ್ವಾಂಸರೆಲ್ಲರೂ ಒಪ್ಪಿಕೊಂಡಿದ್ದಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೆಗೊಂದಿ ಬಳಿ ಕೆಂಪೇಗೌಡ ಅವರನ್ನು ಬಂಧಿಸಿದ್ದು ಅನುಮಾನ ಎನ್ನುವ ಚರ್ಚೆಗೆ ಇದರಿಂದ ತೆರೆ ಬಿದ್ದಿದೆ. ಈ ಕುರಿತು ನಾನು ಸಮರ್ಥಿಸಿಕೊಳ್ಳಲು ಸಿದ್ಧವಿದ್ದು, ಸಾಕಷ್ಟು ಪುರಾವೆಗಳು ಇವೆ ಎನ್ನುತ್ತಾರೆ.
ಕೆಂಪೇಗೌಡ ಅವರನ್ನು ಬಂಧಿಸಿದ್ದರು ಎನ್ನುವುದನ್ನು ಹಲವರು ಸಂಶೋಧನೆಯ ವೇಳೆ ತಿಳಿಸಿದ್ದಾರೆ. ಆದರೆ, ಇದುವರೆಗೂ ಆನೆಗೊಂದಿ ಬಳಿ ಎಲ್ಲಿ ಬಂಧಿಸಿದ್ದರು ಎನ್ನುವುದನ್ನು ಯಾರು ಹೇಳಿರಲಿಲ್ಲ. ಆಗ ನನ್ನ ಸಂಶೋಧನೆಯಲ್ಲಿ ಇದು ಪತ್ತೆಯಾಗಿದ್ದು, ಆನೆಗೊಂದಿ ಬಳಿಯ ಜಿಂಜರ ಬೆಟ್ಟದಲ್ಲಿರುವ ಸೆರೆಮನೆಯಲ್ಲಿ ಕೆಂಪೇಗೌಡ ಅವರನ್ನು ಬಂಧಿಸಿದ್ದರು ಎನ್ನುವುದಕ್ಕೆ ಪುರಾವೆಗಳು ದೊರೆತಿವೆ. ಇದನ್ನೇ ನಾನು ದಾಖಲಿಸಿದ್ದೇನೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.