ಕಾರಾಗೃಹದಲ್ಲಿ ಶಿಕ್ಷಣ ಮುಂದುವರಿಸಲು ಕೈದಿಗಳಿಗೆ ಅವಕಾಶ

KannadaprabhaNewsNetwork |  
Published : Feb 19, 2026, 02:15 AM IST
ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕಕುಮಾರ ಬುಧವಾರ ಧಾರವಾಡ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರಾಗೃಹದ ಭದ್ರತಾ ಸಿಬ್ಬಂದಿ ಅವರನ್ನು ಸಹ ತಪಾಸಣೆಗೆ ಒಳಪಡಿಸಿದರು. | Kannada Prabha

ಸಾರಾಂಶ

ಸಾಕಷ್ಟು ಕೈದಿಗಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಕೆಲವರು ಅನಕ್ಷರಸ್ಥರು, ಮತ್ತೆ ಕೆಲವರು 5ನೇ ತರಗತಿ, ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿರುತ್ತಾರೆ. ವರ್ಷಗಟ್ಟಲೇ ಕಾರಾಗೃಹದಲ್ಲಿ ಇರುವ ಕಾರಣದಿಂದ ಅವರಿಗೆ 1ನೇ ತರಗತಿಯಿಂದ ಪದವಿ ವರೆಗೂ ಶಿಕ್ಷಣ ನೀಡಲಾಗುವುದು ಎಂದು ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕಕುಮಾರ ತಿಳಿಸಿದರು.

ಧಾರವಾಡ:

ಕಾರಾಗೃಹಗಳಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅವರು ಮಾನಸಿಕ ಒತ್ತಡದಿಂದ ಹೊರ ಬಂದು, ಉತ್ತಮ ಆಲೋಚನೆ ಹೊಂದಲು ಮೊಟಕುಗೊಂಡ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕಕುಮಾರ ಹೇಳಿದರು.

ಬುಧವಾರ ಇಲ್ಲಿಯ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿ, ಸಾಕಷ್ಟು ಕೈದಿಗಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಕೆಲವರು ಅನಕ್ಷರಸ್ಥರು, ಮತ್ತೆ ಕೆಲವರು 5ನೇ ತರಗತಿ, ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿರುತ್ತಾರೆ. ವರ್ಷಗಟ್ಟಲೇ ಕಾರಾಗೃಹದಲ್ಲಿ ಇರುವ ಕಾರಣದಿಂದ ಅವರಿಗೆ 1ನೇ ತರಗತಿಯಿಂದ ಪದವಿ ವರೆಗೂ ಶಿಕ್ಷಣ ನೀಡಲಾಗುವುದು. ಅದಕ್ಕಾಗಿ ರಾಷ್ಟ್ರೀಯ ಮುಕ್ತ ಶಾಲೆ ಹಾಗೂ ರಾಜ್ಯ ಮುಕ್ತ ವಿವಿ ಜತೆಗೆ ಮಾತುಕತೆ ಸಹ ನಡೆದಿದೆ. ಒತ್ತಡಕ್ಕೆ ಒಳಗಾಗಿ ಧಾರವಾಡ ಸೇರಿದಂತೆ ಹಲವು ಕಾರಾಗೃಹದಲ್ಲಿ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಅವರ ಕೈಗೆ ಕೆಲಸ ನೀಡುವ ಮೂಲಕ ಅವರ ಮನಸ್ಸು ಉತ್ತಮ ಮಾರ್ಗದತ್ತ ಹೊರಳಲು ಇಲಾಖೆ ಹಲವು ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತಿದೆ ಎಂದರು.

ಮಾದಕ ದ್ರವ್ಯ ಕಡಿವಾಣಕ್ಕೆ ಕ್ರಮ:

ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ತೀವ್ರ ತಪಾಸಣೆ ನಂತರವೂ ಕದ್ದು ಮುಚ್ಚಿ ಮಾದಕ ದ್ರವ್ಯ ಉಪಯೋಗ, ಮೊಬೈಲ್‌ ಬಳಕೆ ಅಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಇಲಾಖೆಯು ತೀವ್ರ ಕಠಿಣ ಕ್ರಮಕೈಗೊಳ್ಳುತ್ತಿದೆ. ಕಾರಾಗೃಹಕ್ಕೆ ಬರುವ ಕೈದಿ ಸೇರಿದಂತೆ ಪ್ರತಿಯೊಬ್ಬರನ್ನು ಭೌತಿಕ ತಪಾಸಣೆ ಜತೆಗೆ ಹೊಸ ಕೈದಿಗಳಿಗೆ ವೈದ್ಯರಿಂದ ಮಾದಕ ದ್ರವ್ಯ ತಪಾಸಣೆ ಸಹ ಮಾಡಿಸಲಾಗುತ್ತಿದೆ. ಇದರೊಂದಿಗೆ ಸಂಶಯಾಸ್ಪದ ಕೈದಿಗಳಿಗೂ ಈ ರೀತಿ ತಪಾಸಣೆ ಮಾಡಲಾಗುತ್ತಿದೆ. ಕಾರಾಗೃಹಗಳಲ್ಲಿ ಯಾವುದೇ ಗದ್ದಲ-ಗೊಂದಲ ಆಗದಂತೆ ಯುವ ಅಪರಾಧಿಗಳು, ಹೊಸ ಕೈದಿಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅಲೋಕಕುಮಾರ ಉತ್ತರಿಸಿದರು.

ಕಾರಾಗೃಹದಲ್ಲಿ ಮೊಬೈಲ್‌ ಜಾಮರ್‌ ಇರುವ ಹಿನ್ನೆಲೆಯಲ್ಲಿ ಸುತ್ತಲಿನ ಪ್ರದೇಶದಲ್ಲೂ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಲೋಕ ಕುಮಾರ, ಊರಿನ ಹೊರಗಿದ್ದ ಕಾರಾಗೃಹಗಳು ಜನಸಂಖ್ಯೆ ಬೆಳದಂತೆ ನಗರದ ಮಧ್ಯೆಕ್ಕೆ ಬಂದಿವೆ. ಕಾರಾಗೃಹ ವ್ಯಾಪ್ತಿ ಮೊಬೈಲ್‌ ನೆಟ್‌ವರ್ಕ್ ಸಿಗದಂತೆಯೂ ಹಾಗೂ ಸುತ್ತಲಿನ ಪ್ರದೇಶದಲ್ಲಿ ಈ ಸಮಸ್ಯೆ ಉಂಟಾಗದಂತೆಯೂ ಪ್ರಯತ್ನಗಳು ನಡೆದಿವೆ ಎಂದ ಅವರು, ಬೆಂಗಳೂರು, ಗದಗ, ಕೋಲಾರ, ಮಂಗಳೂರು ಕಾರಾಗೃಹದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕೈದಿಗಳಿದ್ದು, ಧಾರವಾಡ, ಬೆಳಗಾವಿಯಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಇಲ್ಲ ಎಂದರು.

ಇನ್ನು, ಧಾರವಾಡ ಕಾರಾಗೃಹ ಭೇಟಿಯ ವೇಳೆ ಕೈದಿಗಳ ಪರಿಶೀಲನೆ ಮಾಡಿಲ್ಲ. ಇಲ್ಲಿಯ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಿರಂತರವಾಗಿ ಕಾರಾಗೃಹ ಅಧಿಕಾರಿಗಳು ತಪಾಸಣೆ ಕೈಗೊಳ್ಳುವುದು, ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯ ಮಾಡುತ್ತಾರೆ. ಕಾಯಂ ವೈದ್ಯರೊಬ್ಬರ ಬೇಡಿಕೆ ಹೊರತುಪಡಿಸಿ ಮತ್ತಾವ ಸಮಸ್ಯೆಗಳು ಇಲ್ಲಿ ಕಂಡು ಬಂದಿಲ್ಲ ಎಂದು ಅಲೋಕಕುಮಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾವಣೆಗೆ ತಕ್ಕಂತೆ ಕೈಗಾರಿಕೆ ವೇಗ ಹೆಚ್ಚಿಸಿಕೊಳ್ಳಿ: ವಿಜಯ ಸಂಕೇಶ್ವರ
ಶೀಘ್ರ ಬೆಳ್ಳೂಡಿ–ರಾಮತೀರ್ಥ ಸೇತುವೆ ಪುನರ್ ನಿರ್ಮಾಣ: ಶಾಸಕ ಬಿ.ಪಿ.ಹರೀಶ್