ಸಾಹಿತ್ಯ ಸಂಪರ್ಕದಿಂದ ಕೈದಿಗಳು ಶರಣರಾಗಲಿ: ಡಾ. ನಾಗರಾಜ ದ್ಯಾಮನಕೊಪ್ಪ

KannadaprabhaNewsNetwork |  
Published : Jun 21, 2025, 12:49 AM IST
20ಎಚ್‌ವಿಆರ್3 | Kannada Prabha

ಸಾರಾಂಶ

ಸೌಹಾರ್ದ ಎಂದರೆ ಮನುಷ್ಯತ್ವ. ಆದರೆ ಮನುಷ್ಯರನ್ನು, ಮನುಷ್ಯತ್ವವನ್ನು ಕೊಲ್ಲುವ ವ್ಯವಸ್ಥೆಯಲ್ಲಿದ್ದೇವೆ. ಇದಕ್ಕಾಗಿ ಸಾಹಿತ್ಯ ಓದಬೇಕು. ಸಾಹಿತ್ಯವು ಜ್ಞಾನದ ಜತೆಗೆ ವಿವೇಕವನ್ನು ಮತ್ತು ಮನುಷ್ಯತ್ವವನ್ನು ಕಲಿಸುತ್ತದೆ.

ಹಾವೇರಿ: ಜೈಲುಗಳು ಶರಣರ ಅನುಭವ ಮಂಟಪಗಳಾಗಲಿ. ಸಾಹಿತ್ಯ ಸಂಪರ್ಕದಿಂದ ಕೈದಿಗಳು ಶರಣರಾಗಲಿ ಎಂದು ಶಿಗ್ಗಾಂವಿಯ ಚೆನ್ನಪ್ಪ ಕುನ್ನೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಆಶಿಸಿದರು.ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿರುವ ಸಾಹಿತ್ಯ ಕಮ್ಮಟದ ಎರಡನೇ ದಿನವಾದ ಶುಕ್ರವಾರ ವಚನ ಸಾಹಿತ್ಯದ ಮಹತ್ವ ಕುರಿತು ಮಾತನಾಡಿದರು.ಜಡತ್ವ ಸಮಾಜವನ್ನು ಜಂಗಮವಾಗಿಸಿದ ಅಲ್ಲದೆ ಜಾತಿ ವ್ಯವಸ್ಥೆ ಮುರಿದು ಸಮಾನತೆಯ ಸಮಾಜ ಕಟ್ಟಲು ಬಸವಾದಿ ಶರಣರು ಶ್ರಮಿಸಿದರು. ಸಮಾಜದ ಔನ್ನತ್ಯಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯಕ್ಕೆ ಅನುಗುಣವಾಗಿ ಬದುಕಬೇಕಿದೆ ಎಂದು ಸಲಹೆ ನೀಡಿದರು.ಕಲಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಎಂದ ಬಸವಣ್ಣನವರ ವಚನದಂತೆ ಬೇಡಗಳನ್ನು ಅಳವಡಿಸಿಕೊಂಡರೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.ಕನ್ನಡ ಕಾವ್ಯದಲ್ಲಿ ಸೌಹಾರ್ದ ನೆಲೆಗಳು ಕುರಿತು ಸಾಹಿತಿ ಹೆಬಸೂರ ರಂಜಾನ್ ಮಾತನಾಡಿ, ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು. ತಿಳಿದು ಬದುಕಿದರೆ ಅಳಿದ ಮೇಲೂ ಉಳಿಯುತ್ತೇವೆ ಎಂದರು. ಸೌಹಾರ್ದ ಎಂದರೆ ಮನುಷ್ಯತ್ವ. ಆದರೆ ಮನುಷ್ಯರನ್ನು, ಮನುಷ್ಯತ್ವವನ್ನು ಕೊಲ್ಲುವ ವ್ಯವಸ್ಥೆಯಲ್ಲಿದ್ದೇವೆ. ಇದಕ್ಕಾಗಿ ಸಾಹಿತ್ಯ ಓದಬೇಕು. ಸಾಹಿತ್ಯವು ಜ್ಞಾನದ ಜತೆಗೆ ವಿವೇಕವನ್ನು ಮತ್ತು ಮನುಷ್ಯತ್ವವನ್ನು ಕಲಿಸುತ್ತದೆ ಎಂದರು.ಮುಖ್ಯ ಅತಿಥಿಯಾದ ಗೊಟಗೋಡಿಯ ರಾಕ್ ಗಾರ್ಡನ್ ಕ್ಯುರೇಟರ್ ವೇದಾರಾಣಿ ದಾಸನೂರ ಮಾತನಾಡಿ, ಇನ್ನೊಬ್ಬರೊಂದಿಗೆ ಹೊಡೆದಾಡಲು ಜಿಮ್‌ಗೆ ಹೋಗಬೇಡಿ. ಹರೆಯ ಎಂದರೆ ಕುದಿಯಿದ್ದ ಹಾಗೆ. ಕುದಿಯದೆ ಕುದ್ದು ಆರಿದ ನೀರಿನ ಹಾಗೆ ಬದುಕಿ. ಕುಡಗೋಲು, ಕೊಡಲಿಗಳನ್ನು ಹೊಲದಲ್ಲಿ ಕೆಲಸ ಮಾಡಲು ಬಳಸಿ. ಯಾವುದೇ ಕಾರಣಕ್ಕೂ ಇನ್ನೊಬ್ಬರ ಕುತ್ತಿಗೆ ಕೊಯ್ಯಲು ಬಳಸಬೇಡಿ. ಮದ್ಯವ್ಯಸನಿಯಾಗದೆ ಹೊಸ ಬದುಕು ಕಟ್ಟಿಕೊಳ್ಳಿ ಎಂದರು. ರೈತ ಕವಿ ಚಂಸು ಪಾಟೀಲ ಮಾತನಾಡಿ, ನಮ್ಮ ಜಮೀನಿಗೆ ಗೊಬ್ಬರ, ಔಷಧಿ ಹಾಕದೆ ಸಾವಯವ ಕೃಷಿಯಿಂದಾಗಿ ಖರ್ಚು ಕಡಿಮೆಯಾಗಿದೆ. ಬೀಜ, ಗೊಬ್ಬರ, ಔಷಧಿ ಖರೀದಿಸದೆ ಇರುವುದರಿಂದ ಬಂಡವಾಳ ಕಡಿಮೆ ಹಾಗೂ ಲಾಭ ಹೆಚ್ಚು. ಕೃಷಿ ಸಲುವಾಗಿ ಸಾಲ ಮಾಡದೆ ನೆಮ್ಮದಿಯಿಂದ ಇದ್ದೇನೆ. ಕೃಷಿಯಿಂದ ಲಾಭವಿಲ್ಲ ಎಂದು ಊರು ತೊರೆಯುವ ಯುವಕರು ಸಣ್ಣಪುಟ್ಟ ಕೆಲಸಗಳಿಗಾಗಿ ನಗರ ಸೇರುತ್ತಾರೆ. ಆದರೆ ಭೂಮಿತಾಯಿ ನಂಬಿ ಕೃಷಿ ಮಾಡಬೇಕು. ಇದರಿಂದ ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದರು.ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾಂವ್ ಮತ್ತು ಬಸವರಾಜ ಕರಡಿ ತತ್ವಪದಗಳನ್ನು ಹಾಡಿದರು. ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ