ಬೇಕಾಬಿಟ್ಟಿಯಾಗಿ ಬಸ್ ಪ್ರಯಾಣ ದರ ಹೆಚ್ಚಿಸುವ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಲೆಕ್ಕಿಸದ ಖಾಸಗಿ ಸಾರಿಗೆ ಬಸ್‌ಗಳು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಮೂಲಿ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರ ವಸೂಲಿ ಮಾಡಲು ಮುಂದಾಗಿವೆ.
ಬೆಂಗಳೂರು : ಹಬ್ಬ ಹಾಗೂ ಸಾಲುಸಾಲು ರಜಾ ದಿನಗಳಲ್ಲಿ ಬೇಕಾಬಿಟ್ಟಿಯಾಗಿ ಬಸ್ ಪ್ರಯಾಣ ದರ ಹೆಚ್ಚಿಸುವ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಲೆಕ್ಕಿಸದ ಖಾಸಗಿ ಸಾರಿಗೆ ಬಸ್‌ಗಳು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಮೂಲಿ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರ ವಸೂಲಿ ಮಾಡಲು ಮುಂದಾಗಿವೆ.
ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ವಿಚಾರದಲ್ಲಿ ಸಾರಿಗೆ ಇಲಾಖೆಯು ಖಾಸಗಿ ಬಸ್‌ಗಳಿಗೆ ನೀಡುತ್ತಿರುವ ಎಚ್ಚರಿಕೆ ಹುಲಿ ಬಂತು ಹುಲಿ ಕಥೆಯಂತಾಗುತ್ತಿದೆ. ಪ್ರತಿ ಹಬ್ಬ ಬಂದಾಗಲೂ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿವೆ. ಅದಕ್ಕೆ ಬದಲಾಗಿ ಸಾರಿಗೆ ಇಲಾಖೆ ಕೆಲ ಬಸ್‌ಗಳನ್ನು ತಪಾಸಣೆ ನಡೆಸಿ ಅವುಗಳ ಮೇಲೆ ದಂಡ ವಿಧಿಸಿ ಸುಮ್ಮನಾಗುತ್ತಿದೆ. ಅಲ್ಲದೆ, ಬೇಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡುತ್ತಿದೆ. ಆದರೆ, ಖಾಸಗಿ ಬಸ್‌ಗಳು ಮಾತ್ರ ಸಾರಿಗೆ ಇಲಾಖೆ ಎಚ್ಚರಿಕೆಗೆ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಮಾಮೂಲಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿಗೆ ಮುಂದಾಗಿವೆ.
ಬುಕ್ಕಿಂಗ್ ಆ್ಯಪ್‌ಗಳಲ್ಲಿದುಬಾರಿ ಪ್ರಯಾಣ ದರ
ಈ ಬಾರಿಯ ದೀಪಾವಳಿ ಹಬ್ಬ ಅ.31ರಿಂದ 2ರವರೆಗೆ ಇರಲಿದೆ. ಅಂದರೆ ಗುರುವಾರದಿಂದ ಶನಿವಾರದವರೆಗೆ ಇರಲಿದ್ದು, ಭಾನುವಾರವೂ ಸೇರಿದರೆ ಒಟ್ಟು ನಾಲ್ಕು ದಿನ ಸರ್ಕಾರಿ ರಜೆ ಇರಲಿದೆ. ಸಾಲುಸಾಲು ರಜೆಯ ಜತೆಗೆ ಹಬ್ಬ ಇರುವ ಕಾರಣದಿಂದಾಗಿ ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಅದನ್ನು ಅರಿತಿರುವ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಿಸಿದ್ದಾರೆ. ಬಸ್ ಮುಂಗಡ ಟಿಕೆಟ್ ಕಾಯ್ದಿರಿಸುವ ಬುಕ್ಕಿಂಗ್ ಆ್ಯಪ್‌ಗಳಲ್ಲಿ ನಿಗದಿ ಮಾಡಿರುವ ದರವನ್ನು ಗಮನಿಸಿದರೆ ಈ ಬಾರಿ ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್‌ಗಳಲ್ಲಿ ತೆರಳುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುವುದು ಖಚಿತವಾಗಿದೆ.
ಎಚ್ಚರಿಕೆ ನೀಡುವುದಕ್ಕಷ್ಟೇ ಸಾರಿಗೆ ಇಲಾಖೆ ಸೀಮಿತ
ಈ ಬಾರಿಯೂ ಸಾರಿಗೆ ಇಲಾಖೆ ದುಬಾರಿ ಪ್ರಯಾಣ ದರ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿದೆ. ಆದರೆ, ಕಳೆದ ಗಣೇಶ ಹಬ್ಬ ಮತ್ತು ದಸರಾ ಹಬ್ಬದ ಸಂದರ್ಭದಲ್ಲೂ ಇದೇ ರೀತಿಯ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಬಸ್‌ಗಳ ಪರ್ಮಿಟ್ ರದ್ದು ಮಾಡುವ ಮೂಲಕ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೂ ಅಧಿಕಾರಿಗಳು ತಿಳಿಸಿದ್ದರು. ಆದರೆ, ಆ ಎಚ್ಚರಿಕೆ ಕಾರ್ಯಗತಗೊಳ್ಳದ ಕಾರಣ ಖಾಸಗಿ ಬಸ್ ಮಾಲೀಕರು ಸಾರಿಗೆ ಇಲಾಖೆಯನ್ನು ಗಂಭೀರವಾಗಿ ಪರಿಗಣಿಸದಂತಾಗಿದೆ.