ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಬಯಲು ಸೀಮೆಯಾಗಿರುವ ನಮ್ಮ ಕಡೂರು ತಾಲೂಕಿನ ಮಣ್ಣಿನ ಗುಣದಂತೆ ಕಬಡ್ಡಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಹಾಗು ಕ್ರೀಡಾ ಪಟುಗಳಿಗೆ ಮೊದಲಿನಿಂದಲೂ ಬೆನ್ನು ತಟ್ಟಿ ಬೆಂಬಲಿಸುತ್ತಾ ಬರುತ್ತಿದೆ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ 14 ಮತ್ತು 17 ವರ್ಷ ವಯೋಮಾನದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಡೂರು ಪಟ್ಟಣದಲ್ಲಿ ಹಿಂದೆ ಕುಸ್ತಿ, ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ರಾಜ್ಯಮಟ್ಟದಲ್ಲಿ ಸತತ ಗೆಲುವು ಸಾಧಿಸುತ್ತಿದ್ದು ಇತಿಹಾಸ.ನಮ್ಮ ದೇಸಿ ಕ್ರೀ ಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ನಮ್ಮಮಣ್ಣಿನ ಗುಣವಾಗಿದೆ. ಕಬಡ್ಡಿ ಆಟವು ನಮ್ಮ ಗ್ರಾಮೀಣ ಸೊಗಡಿನ ಕ್ರೀಡೆ ಆಗಿದ್ದು. ಇತ್ತೀಚೆಗೆ ಈ ಕಬಡ್ಡಿ ಆಟ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕ್ರೀಡೆ ಗೆಲ್ಲಬೇಕು. ಕಬಡ್ಡಿ ಕ್ರೀಡಾಕೂಟ ನಮ್ಮೆಲ್ಲರನ್ನು ಬೆಸೆಯುವ ಕೂಟವಾಗಲಿ ಶಿಕ್ಷಕ ವೈ.ಎಂ.ಗೋಪಿಯವರ ಶ್ರಮ ಅಭಿನಂದನೀಯ ಎಂದರು.
ಪುರಸಭೆ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ಅಪಾರ ದೈಹಿಕ ಶ್ರಮ ಬೇಡುವ ಕಬಡ್ಡಿ ಕ್ರೀಡೆ ನಮ್ಮ ನಾಡಿನ ಸಂಸ್ಕೃತಿ, ಕಲೆಯ ಪ್ರತೀಕ ಎಂದು ಹೇಳಿ ಶುಭ ಹಾರೈಸಿದರು.