ಖಾಸಗಿ ಕ್ಲಬ್‌ ನಿಯಂತ್ರಿಸಿ: ಸದನ ಸಮಿತಿ

KannadaprabhaNewsNetwork | Updated : Feb 16 2024, 01:46 AM IST

ಸಾರಾಂಶ

ಬ್‌ಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಧಾನಪರಿಷತ್‌ ವಿಶೇಷ ಸದನ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ವಿಧಾನಪರಿಷತ್

ಶಾಸಕರಿಗಾಗಿ ಬಾಲಬ್ರೂಯಿಯಲ್ಲಿ ಸಾಂವಿಧಾನಿಕ ಕ್ಲಬ್‌ ಸ್ಥಾಪನೆ, ಖಾಸಗಿ ಕ್ಲಬ್‌ಗಳಲ್ಲಿ ಶಾಸಕರು, ಸಂಸದರಿಗೆ ಸದಸ್ವತ್ವ ನೀಡುವುದು, ರಾಜ್ಯದಲ್ಲಿನ ಮನರಂಜನಾ ಕ್ಲಬ್‌ಗಳನ್ನು ನಿಯಂತ್ರಿಸಲು ಕರ್ನಾಟಕ ಸಂಘಗಳ ನೋಂದಣಿ ಮಸೂದೆಗೆ ತಿದ್ದುಪಡಿ ತರಬೇಕು ಎಂಬುದು ಸೇರಿದಂತೆ ಕ್ಲಬ್‌ಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಧಾನಪರಿಷತ್‌ ವಿಶೇಷ ಸದನ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ರಾಜ್ಯ ಮತ್ತು ಬಿಬಿಎಂಪಿಯಲ್ಲಿನ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವ ಕುರಿತು ಬಿಜೆಪಿಯ ಎನ್‌. ರವಿಕುಮಾರ್‌ ಅಧ್ಯಕ್ಷತೆಯಲ್ಲಿ 2020ರ ಜೂನ್‌ನಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಸಮಿತಿಯು ಬೆಂಗಳೂರಿನ ವಿವಿಧ ಕ್ಲಬ್‌ಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದೆ. ವರದಿಯಲ್ಲಿ ಕ್ಲಬ್‌ಗಳ ಕಾರ್ಯವೈಖರಿ ಸುಧಾರಿಸುವುದು ಹಾಗೂ ಸರ್ಕಾರ ನಿಯಂತ್ರಣ ಹೊಂದುವ ಕುರಿತಂತೆ 23 ಶಿಫಾರಸುಗಳನ್ನು ಮಾಡಲಾಗಿದ್ದು, ಗುರುವಾರ ವಿಧಾನ ಪರಿಷತ್‌ನಲ್ಲಿ ವರದಿಯನ್ನು ಮಂಡಿಸಲಾಯಿತು.ಕ್ಲಬ್‌ಗಳ ನಿಯಂತ್ರಣಕ್ಕೆ ಮಸೂದೆಗೆ ತಿದ್ದುಪಡಿ:

ರಾಜ್ಯದಲ್ಲಿನ ಬಹುತೇಕ ಮನರಂಜನಾ ಕ್ಲಬ್‌ಗಳಲ್ಲಿ ಸಾಂಸ್ಕೃತಿಕ ಉಡುಗೆ ಪ್ರವೇಶಕ್ಕೆ ನಿಷೇಧವಿದ್ದು, ಅದನ್ನು ತೆರವು ಮಾಡುವಂತೆ ಕ್ಲಬ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕ್ಲಬ್‌ಗಳ ಸದಸ್ಯತ್ವ ಶುಲ್ಕ ನಿಗದಿಗೆ ಸರ್ಕಾರವು ಸೂಕ್ತ ಮಾನದಂಡ ರೂಪಿಸಬೇಕು ಹಾಗೂ ಕ್ಲಬ್‌ಗಳು ಅದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸರ್ಕಾರದಿಂದ ಭೂಮಿ ಮತ್ತು ಇತರ ಸವಲತ್ತು ಪಡೆದಿರುವ ಕ್ಲಬ್‌ಗಳು ವಾರ್ಷಿಕ ಆದಾಯದಲ್ಲಿ ಶೇ.5ರಿಂದ 7ರಷ್ಟನ್ನು ಶುಲ್ಕದ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು ಎಂಬ ಶಿಫಾರಸನ್ನು ವರದಿಯಲ್ಲಿ ಮಾಡಲಾಗಿದೆ. ಅದರ ಜತೆಗೆ ಮನರಂಜನಾ ಕ್ಲಬ್‌ಗಳ ಮೇಲೆ ಸರ್ಕಾರ ಹಿಡಿತ ಹೊಂದಲು ಹಾಗೂ ಕ್ಲಬ್‌ಗಳಲ್ಲಿನ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಕರ್ನಾಟಕ ಸಂಘಗಳ ನೋಂದಣಿ ಮಸೂದೆ 1961ಕ್ಕೆ ತಿದ್ದುಪಡಿ ತರಬೇಕು ಎಂದು ಹೇಳಲಾಗಿದೆ.

ಜನಪ್ರತಿನಿಧಿಗಳಿಗೆ ಸದಸ್ಯತ್ವ, ಹೊಸ ಕ್ಲಬ್‌ ಸ್ಥಾಪನೆ:

ಸರ್ಕಾರದಿಂದ ಭೂಮಿ ಮತ್ತು ಇತರ ಸವಲತ್ತು ಪಡೆದಿರುವ ಕ್ಲಬ್‌ಗಳಲ್ಲಿ ಶಾಸಕರು, ಸಂಸದರಿಗೆ ಅವರ ಕ್ಷೇತ್ರಗಳಲ್ಲಿನ ಕ್ಲಬ್‌ಗಳಲ್ಲಿ ಸದಸ್ಯತ್ವ ನೀಡಬೇಕು. ಅದರ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು, ಶೌರ್ಯ ಪ್ರಶಸ್ತಿ ಪಡೆದ ಮಾಜಿ ಸೈನಿಕರಿಗೂ ಸದಸ್ಯತ್ವ ಕೊಡಬೇಕು. ಜತೆಗೆ ವಿಧಾನಮಂಡಲದ ಸದಸ್ಯರಿಗಾಗಿ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಸಾಂವಿಧಾನಿಕ ಕ್ಲಬ್‌ ಸ್ಥಾಪಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಟರ್ಫ್‌, ಗಾಲ್ಫ್‌

ಕ್ಲಬ್‌ ಸ್ಥಳಾಂತರಿಸಿ

ನಗರದ ಮಧ್ಯಭಾಗದಲ್ಲಿರುವ ಟರ್ಫ್‌ ಕ್ಲಬ್‌ ಹಾಗೂ ಗಾಲ್ಫ್‌ ಕ್ಲಬ್‌ಗಳ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಅದಕ್ಕೆ ಬದಲಾಗಿ ಜಕ್ಕೂರು ಏರೋಡ್ರೋಮ್‌ ಬಳಿ ಅಥವಾ ಕುಣಿಗಲ್‌ನಲ್ಲಿ ಜಮೀನು ಮಂಜೂರು ಮಾಡಿ ಅಲ್ಲಿಗೆ ಅವುಗಳನ್ನು ಸ್ಥಳಾಂತರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

----

ವರದಿಯಲ್ಲಿನ ಇನ್ನಿತರ ಶಿಫಾರಸುಗಳು

*ಕ್ಲಬ್‌ಗಳು ಸರ್ಕಾರಿ ಆಸ್ಪತ್ರೆ ಅಥವಾ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಬೇಕು

*ಕ್ಲಬ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಅವಧಿಯನ್ನು 60 ವರ್ಷಕ್ಕೆ ಸೀಮಿತಗೊಳಿಸಬೇಕು

*ಹೊಸ ಬಡಾವಣೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಮನರಂಜನಾ ಕ್ಲಬ್‌ ಸ್ಥಾಪನೆಗೆ ಸ್ಥಳ ನಿಗದಿ ಮಾಡಬೇಕು

*ಪ್ರತಿ ಕ್ಲಬ್‌ನಲ್ಲೂ ಸದಸ್ಯರಿಗಾಗಿ ಹೆಲ್ತ್‌ ಕ್ಲಬ್‌ ವ್ಯವಸ್ಥೆ ಮಾಡಬೇಕು

*ಪ್ರತಿ ತಾಲೂಕಿನಲ್ಲೂ ಕ್ಲಬ್‌ ಸ್ಥಾಪನೆಗೆ ಸರ್ಕಾರದಿಂದ ಜಾಗ ನೀಡಬೇಕು

*ರಾಜ್ಯದ ಎಲ್ಲ ಕ್ಲಬ್‌ಗಳು ಸರ್ಕಾರದ ಅಧಿನಿಯಮದ ವ್ಯಾಪ್ತಿಗೊಳಪಡಬೇಕು, ಇಲ್ಲದಿದ್ದರೆ ನೀರು, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಅಬಕಾರಿ ಪರವಾನಗಿ ರದ್ದು ಮಾಡಬೇಕು.

Share this article