ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಹಲವು ವರ್ಷಗಳಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಶಿಕ್ಷಣ ಬೆಳೆದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಗದಗ: ಖಾಸಗಿ ಸೇವಾ ಸಂಸ್ಥೆಗಳು, ಟ್ರಸ್ಟ್‌ಗಳು ಸಮುದಾಯದಲ್ಲಿನ ಪ್ರತಿಯೊಬ್ಬ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲಬೇಕು, ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಹಲವು ವರ್ಷಗಳಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಶಿಕ್ಷಣ ಬೆಳೆದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಅವರು ಭಾನುವಾರ ಗದಗ ನಗರದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ನಗರದ ಕನಕ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸಮಾನತೆ ತರಲು ಜಾತಿ ವ್ಯವಸ್ಥೆ ವಿರುದ್ಧ ಮೊದಲು ಹೋರಾಡಬೇಕು. ಸಾಮಾಜಿಕ ನ್ಯಾಯ ಒದಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿದ್ದಾರೆ. ಸರ್ಕಾರದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸಿಎಂ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಯಾರೂ ಕೂಡಾ ಧರ್ಮದಲ್ಲಿ ರಾಜಕಾರಣ ಮಾಡಬಾರದು. ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಮತ ಕೇಳಬಾರದು. ಧರ್ಮ ಕಟ್ಟಲು ಮಠಾಧೀಶರು, ಸಂತರು ಇದ್ದಾರೆ. ರಾಜಕಾರಣಿಗಳು ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕು ಎಂದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ ಮಾತನಾಡಿ, ಆಡಳಿತದಲ್ಲಿ ಕೆಲಸ ಮಾಡಲು ಅವಕಾಶ ಇದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು. ಈ ಹಿನ್ನೆಲೆಯಲ್ಲಿ ಶಶಿಧರ ರೊಳ್ಳಿ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವಂತ ಕಾರ್ಯಕ್ರಮಕ್ಕೆ ಸಮುದಾಯದ, ಸರ್ಕಾರದ ಸಹಕಾರ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಂತರ ಟ್ರಸ್ಟ್ ವತಿಯಿಂದ ಯತೀಂದ್ರ ಅವರನ್ನು ಸನ್ಮಾನಿಸಲಾಯಿತು. ಶಶಿಧರ ರೊಳ್ಳಿ, ಫಕ್ಕಿರಪ್ಪ ಹೆಬಸೂರು, ಧವನ್ ರಾಕೇಶ್, ರವಿ ಗುಂಜೀಕರ್, ಚೆನ್ನಮ್ಮ ಹುಳಕನ್ನವರ, ಪ್ರಕಾಶ ಕರಿ, ಶೇಖಣ್ಣ ಕಾಳೆ, ರಮೇಶ ವಡವಿ ಸೇರಿದಂತೆ ಅನೇಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.