ಶಾಲಾ ಕಾಲೇಜು ಅಭಿವೃದ್ಧಿಗೆ ಸರ್ಕಾರದ ಜೊತೆ ಖಾಸಗಿ ಸಹಬಾಗಿತ್ವ ಅಗತ್ಯ: ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork | Published : Apr 8, 2025 12:34 AM

ಸಾರಾಂಶ

ಉತ್ತಮ ಶಿಕ್ಷಣ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಕಾಲೇಜಿನಲ್ಲಿ ೪೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಭೋದಕ ವೃಂದ ಇದ್ದು ಉತ್ತಮ ವಾತಾವರಣವೂ ಇದೆ. ಆದ್ದರಿಂದ ಸುಮಧುರ ಇನ್ಫೋಕಾನ್ ಸಂಸ್ಥೆ ಇದರ ಅಭಿವೃದ್ಧಿಗೆ ಮುಂದಾಗಿರುವುದು ಸಂತಸ ತಂದಿದೆ .

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯತೆ ಹೆಚ್ಚಾಗಿದ್ದು, ಖಾಸಗಿಯವರ ಸಹಕಾರ ಧಕ್ಕಿದರೆ ಮಾತ್ರ ಉತ್ತಮ ಸವಲತ್ತುಗಳನ್ನು ಸಮಾಜಕ್ಕೆ ನೀಡಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಸುಮಧುರ ಇನ್ಫೋಕಾನ್ ಸಂಸ್ಥೆಯ ವತಿಯಿಂದ 90.03 ಲಕ್ಷ ರು.ಗಳ ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಸುಮಧುರ ಇನ್ಫೋಕಾನ್ ಸಂಸ್ಥೆಗಳು ಈ ಭಾಗದ ಜನರಿಗೆ ನೂರಾರು ಹುದ್ದೆಗಳನ್ನು ನೀಡುವ ಉತ್ತಮ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಮುಖ್ಯಸ್ಥರ ಆಶಯದಂತೆ ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ನವೀಕರಣಗೊಳಿಸುವ ಮೂಲಕ ಖಾಸಗಿ ಕಾಲೇಜುಗಳಿಗಿಂತ ಉತ್ತಮ ಶಿಕ್ಷಣ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಕಾಲೇಜಿನಲ್ಲಿ ೪೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಭೋದಕ ವೃಂದ ಇದ್ದು ಉತ್ತಮ ವಾತಾವರಣವೂ ಇದೆ. ಆದ್ದರಿಂದ ಸುಮಧುರ ಇನ್ಫೋಕಾನ್ ಸಂಸ್ಥೆ ಇದರ ಅಭಿವೃದ್ಧಿಗೆ ಮುಂದಾಗಿರುವುದು ಸಂತಸ ತಂದಿದೆ ಎಂದರು.

ಸುಮಧುರ ಇನ್ಫೋಕಾನ್ ಸಂಸ್ಥೆಯ ನಿರ್ದೇಶಕ ಭರತ್ ಮಾತನಾಡಿ, ನಮ್ಮ ಸಂಸ್ಥೆಯ ಸಿಎಸ್‌ಆರ್ ಅನುದಾನದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಸಹಕಾರ ನೀಡಲಾಗುವುದು. ಉತ್ತಮ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಇದ್ದಲ್ಲಿ ಮಾತ್ರ ಸಮಾಜ ಉತ್ತಮವಾಗಿರುತ್ತದೆ. ಪ್ರತಿ ವರ್ಷ ಒಂದು ಶಾಲೆ ಅಥವಾ ಕಾಲೇಜು ಅಭಿವೃದ್ಧಿಗೆ ಸಂಸ್ಥೆ ಕಾರ್ಯಪ್ರವೃತ್ತವಾಗುತ್ತದೆ ಎಂದರು.

ಸುಮಧುರ ಇನ್ಫೋಕಾನ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥೆ ಜೀವನ, ಸಂದೀಪ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕ ಡಾ. ಎಚ್. ಎಂ. ಸುಬ್ಬರಾಜ್, ಮುಖಂಡರಾದ ಡಾ.ಸಿ.ಜಯರಾಜ್, ಆರ್‌ಟಿಸಿ ಗೋವಿಂದರಾಜ್, ವಕೀಲ ಸುಬ್ರಮಣಿ, ಪ್ರಾಂಶುಪಾಲ ರಾಜು, ವಕ್ಪ್ ಬೋರ್ಡ್ ಮಾಜಿ ಅಧ್ಯಕ್ಷ ನಿಸಾರ್ ಅಹಮದ್ ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು.

Share this article